ADVERTISEMENT

2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

ಎಂ.ಜಿ.ಬಾಲಕೃಷ್ಣ
Published 29 ಡಿಸೆಂಬರ್ 2025, 5:24 IST
Last Updated 29 ಡಿಸೆಂಬರ್ 2025, 5:24 IST
<div class="paragraphs"><p>ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಪ್ರಯುಕ್ತ ಹೊಸಪೇಟೆಯಲ್ಲಿ ಮೇ 20ರಂದು ನಡೆದ ಸಂಕಲ್ಪ ಸಮರ್ಪಣಾ ಸಮಾವೇಶದ ಒಂದು ಸನ್ನಿವೇಶ</p></div>

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಪ್ರಯುಕ್ತ ಹೊಸಪೇಟೆಯಲ್ಲಿ ಮೇ 20ರಂದು ನಡೆದ ಸಂಕಲ್ಪ ಸಮರ್ಪಣಾ ಸಮಾವೇಶದ ಒಂದು ಸನ್ನಿವೇಶ

   

ಹೊಸಪೇಟೆ (ವಿಜಯನಗರ): ‘ಜನರಿಗೆ ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿಯೇ ನಮ್ಮ ಕೈಹಿಡಿದಿದೆ’ ಎಂದು ಹೇಳಿದ  ರಾಜ್ಯ ಸರ್ಕಾರ ತನ್ನ ಎರಡು ವರ್ಷದ ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ನಡೆಸಿತು. ಮೇ 20ರಂದು 1.5 ಲಕ್ಷಕ್ಕೂ ಅಧಿಕ ಜನ ಸೇರಿಸಿ, ಆರನೇ ಗ್ಯಾರಂಟಿ ರೂಪದಲ್ಲಿ ಹಟ್ಟಿ, ಹಾಡಿ, ಕೇರಿ, ತಾಂಡಾಗಳಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದ 1.11 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿಕೆಗೆ ಚಾಲನೆ ಕೊಡಲಾಯಿತು. 

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಅವರು ಜಿಲ್ಲೆಗೆ ಬಂದಿದ್ದು ಕಡಿಮೆ. ಜಿಲ್ಲಾ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ಬಂದರೂ ಅದರ ಸೇವೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಇದೆಲ್ಲದರ ಮಧ್ಯೆ ಸೆ.27ರಂದು ಜಿಲ್ಲಾ ನ್ಯಾಯಾಲಯ ಉದ್ಘಾಟನೆ, ನ.9ರಂದು ಕೂಡ್ಲಿಗಿಯಲ್ಲಿ 74 ಕೆರೆ ತುಂಬಿಸುವ ಯೋಜನೆಗೆ ಚಾಲನೆ ಸಿಕ್ಕಿತು. ನ.25ರಂದು ಹೊಸಪೇಟೆ ತಾಲ್ಲೂಕಿನ ಬೈಲವದ್ದಿಗೇರಿಯಲ್ಲಿ 110/11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟನೆಯೂ ಆಯಿತು.

ADVERTISEMENT

ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಎಸ್.ಸಂಜೀವ ರೆಡ್ಡಿ ಜ.29ರಂದು ಅಧಿಕಾರ ವಹಿಸಿಕೊಂಡರು. ಆದರೆ ಪಕ್ಷದಲ್ಲಿ ಅಂತಹ ಹೊಸ ಹುಮ್ಮಸ್ಸು ಕಾಣಲಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಗೆ ವರ್ಷದ ಅಂತ್ಯದಲ್ಲೂ ಕೊನೆಯಾಗಲಿಲ್ಲ. ಫೆ.8ರಂದು ಅಶೋಕ್ ಬಿ.ನಾಯ್ಕ್ ಅವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೂ ಅವರ ಕಾರ್ಯವೈಖರಿಗೆ ಪಕ್ಷದೊಳಗೆಯೇ ದೊಡ್ಡ ಮಟ್ಟದ ಅಸಮಾಧಾನ ಆಗಾಗ ಸ್ಫೋಟಗೊಂಡಿತು.

ಹೊಸ ನಿರೀಕ್ಷೆ: ತುಂಗಭದ್ರಾದಿಂದ ಈ ಬಾರಿ ಎರಡನೇ ಬೆಳೆಗೆ ನೀರು ಸಿಗದ ಕಾರಣ ಲಕ್ಷಾಂತರ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಆದರೆ ಹೊಸ ಕ್ರೆಸ್ಟ್‌ಗೇಟ್ ಅಳವಡಿಕೆಗಾಗಿ ಈ ಒಂದು ಬಾರಿ ನಷ್ಟ ಭರಿಸುವುದು ಅವರಿಗೆ ಅನಿವಾರ್ಯವಾಗಿದೆ. ಡಿ.5ರಂದು ತುಂಗಭದ್ರಾ ಕ್ರೆಸ್ಟ್‌ಗೇಟ್‌ ತೆರವು ಕಾರ್ಯ ಆರಂಭವಾದದ್ದು ಮತ್ತು ಡಿ.24ರಂದು ಹೊಸ ಗೇಟ್‌ ಅಳವಡಿಕೆಗೆ ಚಾಲನೆ ಸಿಕ್ಕಿದ್ದೇ ವರ್ಷಾಂತ್ಯದಲ್ಲಿ ಲಕ್ಷಾಂತರ ರೈತರ ಮೊಗದಲ್ಲಿ ನಗು ಮೂಡಲು ಕಾರಣವಾಯಿತು.

ಮರೆಯಲಾರದ ದುರಂತ: ಸೆ.27ರಂದು ಗಾದಿಗನೂರಿನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ನಾಲ್ವರು ಮೃತಪಟ್ಟಿದ್ದನ್ನು,  ಅ.10ರಂದು ಹೂವಿನಹಡಗಲಿ ತಾಲ್ಲೂಕಿನ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಮಂಜುನಾಥ ಶೇಜವಾಡಕರ್ ಅವರನ್ನು ಅಪಹರಿಸಿ ಕೊಲೆ ಮಾಡಿದ್ದನ್ನು. ಸೆ.28ರಂದು ಹೊಸಪೇಟೆಯಲ್ಲಿ ₹5.25 ಕೋಟಿ ಮೊತ್ತದ ವಿಮಾ ಹಣ ಪಡೆಯುವ ಉದ್ದೇಶದಿಂದ ಅಪಘಾತ ಎಂದು ಬಿಂಬಿಸಿ ವ್ಯಕ್ತಿಯ ಕೊಲೆ ಮಾಡಿದ್ದನ್ನು ಅಷ್ಟು ಸುಲಭವಾಗಿ ಮರೆಯಲಾಗದು.

ಮೇ ತಿಂಗಳಲ್ಲಿ ಕೆಲವೊಮ್ಮೆ ಸುರಿದ ಮಳೆಯಿಂದ ಈ ಬಾರಿ ಬೇಸಿಗೆ ಅಷ್ಟು ಖಾರ ಎನಿಸಲಿಲ್ಲ. ಮೇ ಅಂತ್ಯದ ವೇಳೆಗೆ ಮುಂಗಾರು ಆರಂಭವಾಗಿ ಮಳೆಗಾಲ ಉತ್ತಮವಾಗಿ ಮಳೆ ಸುರಿದಿತ್ತು. ತುಂಗಭದ್ರಾ ಜಲಾಶಯದಲ್ಲಿ ಗೇಟ್‌ಗಳು ಶಿಥಿಲವಾಗಿದ್ದಕ್ಕೆ 80 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಸಂಗ್ರಹಿಸಿ 350 ಟಿಎಂಸಿ ಅಡಿಗೂ ಅಧಿಕ ನೀರನ್ನು ನದಿಗೆ ಹರಿಸಲಾಯಿತು. ಜನವರಿ 26ರಂದು ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭದಿಂದ ಬೃಹತ್ ಧ್ವಜ ಕಳಚಿ ಬಿತ್ತು. ಅಂದಿನಿಂದೀಚೆಗೆ ಧ್ವಜಸ್ತಂಭದ ದುರಸ್ತಿ ಆಗಲಿಲ್ಲ.

ಪ್ರಮುಖ ಪ್ರಶಸ್ತಿ ಪುರಸ್ಕೃತರು

  • ಫೆ.10: ಮರಿಯಮ್ಮನಹಳ್ಳಿಯ ಕೆ.ರಾಮಚಂದ್ರಪ್ಪ ಹಾಗೂ ಬ್ಯಾಲಕುಂದಿಯ ಕೊಟ್ಗಿ ಹಾಲೇಶ್ ಅವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ

  •  ಫೆ.13: ಮರಿಯಮ್ಮನಹಳ್ಳಿಯ ಹಿರಿಯ ರಂಗಭೂಮಿ ಕಲಾವಿದೆ ಕೆ.ನಾಗರತ್ನಮ್ಮ ಅವರಿಗೆ ಗುಬ್ಬಿವೀರಣ್ಣ ಪ್ರಶಸ್ತಿ

  •  ಜು. 24: ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರದ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

  •  ಅ.30: ಹೊಸಪೇಟೆಯ ಬಾಣದಕೇರಿಯ ಚಿತ್ರ ಕಲಾವಿದ ಬಿ.ಮಾರುತಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

  •  ಅ.30: ಕೂಡ್ಲಿಗಿ ತಾಲ್ಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ ಸೂಲಗಿತ್ತಿ ಈರಮ್ಮ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

  •  ಡಿ.23: ಹಗರಿಬೊಮ್ಮಮಹಳ್ಳಿ ತಾಲ್ಲೂಕಿನ ಎಚ್‌.ಓಬಳಾಪುರ ಗ್ರಾಮದ ಸುಡುಗಾಡು ಸಿದ್ಧರು ಕಲಾವಿದ ಕಿಂಡ್ರಿ ಲಕ್ಷ್ಮೀಪತಿ ಅವರಿಗೆ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಕೊಟ್ಟೂರಿನ ಉಪನ್ಯಾಸಕ ಇಮಾಮ್ ಸಾಹೇಬ್‌ ಹಡಗಲಿ ಅವರಿಗೆ ಜಾನಪದ ಅಕಾಡೆಮಿಯ ಜಾನಪದ ಸಂಶೋಧನಾ ವಿಭಾಗದ ಪ್ರಶಸ್ತಿ

ಅಗಲಿದ ಪ್ರಮುಖರು

  •  ಜ.10:ಹೊಸಪೇಟೆಯ ಹೋಟೆಲ್‌ ಉದ್ಯಮಿ ಬೇಳೂರು ಕಮಲಾಕ್ಷ ಶಾನುಭಾಗ

  •  ಜ.22: ಹೊಸಪೇಟೆಯ ದಂತ ವೈದ್ಯ ಡಾ.ವೆಂಕಟರಮಣ ಭಾಗವತ

  •  ಮಾರ್ಚ್‌ 21: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಎಚ್.ಷಡಾಕ್ಷರಪ್ಪ

  •  ಮೇ 17: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಸಪೇಟೆಯ ವಿರೂಪಾಕ್ಷಪ್ಪ

  •  ಅ.3: ಮರಿಯಮ್ಮನಹಳ್ಳಿಯ ರಂಗ ಕಲಾವಿದೆ ಡಿ.ಹನುಮಕ್ಕ

  •  ಅ.5: ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮೊಗಳ್ಳಿ ಗಣೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.