ಹೂವಿನಹಡಗಲಿ: ತಾಲ್ಲೂಕಿನ ತಳಕಲ್ಲು ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್‌ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಅತ್ಯಲ್ಪ ನೀರು ಮಾತ್ರ ಕೆರೆ ಒಡಲು ಸೇರುತ್ತಿದೆ.
ತಾಲ್ಲೂಕಿನ ವರಕನಹಳ್ಳಿ, ಸೋಗಿ ಬಳಿ ಕೆಲವರು ಪೈಪ್ ಲೈನ್‌ನಲ್ಲಿ ರಂಧ್ರ ಕೊರೆದು ನೀರನ್ನು ಅಕ್ರಮವಾಗಿ ಹೊಲಗಳಿಗೆ ಹರಿಸಿಕೊಳ್ಳುತ್ತಿದ್ದಾರೆ. ಪೈಪ್ ಲೈನ್ ಕಳಪೆಯಿಂದಲೂ ಕೆಲವೆಡೆ ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ಮಹತ್ವಾಕಾಂಕ್ಷಿ ಕೆರೆ ತುಂಬಿಸುವ ಯೋಜನೆ ಜಾರಿಯಾಗಿದ್ದರೂ ತಳಕಲ್ಲು ಕೆರೆ ಒಡಲು ಭರ್ತಿಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತುಂಗಭದ್ರಾ ನದಿಯ ನೀರನ್ನು ಮಾಗಳ ಜಾಕ್‌ವೆಲ್‌ನಿಂದ ಹುಗಲೂರು ಬಳಿ ಇರುವ ಸಂಪ್‌ಗೆ ಹರಿಸಿ, ಅಲ್ಲಿಂದ ತಳಕಲ್ಲು ಕೆರೆಗೆ ಪಂಪ್ ಮಾಡಲಾಗುತ್ತಿದೆ. ಕಿಡಿಗೇಡಿಗಳು ಪೈಪ್ ಲೈನ್ ಒಡೆದು ಹೊಲಗಳಿಗೆ ಹರಿಸಿಕೊಳ್ಳುತ್ತಿರುವುದರಿಂದ ಕೆರೆಗೆ ನೀರು ತಲುಪುತ್ತಿಲ್ಲ. ಅಧಿಕಾರಿಗಳಿಗೆ ಎಲ್ಲ ಗೊತ್ತಿದ್ದೂ ಕ್ರಮ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ತಳಕಲ್ಲು ಕೆರೆ ಭರ್ತಿಯಾದರೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯುತ್ತದೆ. ಕೆರೆ ತುಂಬಿಸುವ ಯೋಜನೆ ಉದ್ಘಾಟನೆಯಾಗಿ ದಶಕ ಕಳೆದರೂ ತಳಕಲ್ಲು ಕೆರೆ ಭರ್ತಿಯಾಗಿದ್ದು ಒಮ್ಮೆ ಮಾತ್ರ.
ಕಳಪೆ ಪೈಪ್‌ಲೈನ್, ತಾಂತ್ರಿಕ ತೊಂದರೆಗಳಿಂದ ಕೆಲವರ್ಷ ತಳಕಲ್ಲು ಕೆರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಇಟ್ಟಿಗಿ, ತಳಕಲ್ಲು ಭಾಗದ ರೈತರು ಹೋರಾಟ ರೂಪಿಸಿ ಸರ್ಕಾರದ ಗಮನ ಸೆಳೆದ ಬಳಿಕ ಅಧಿಕಾರಿಗಳು ₹27 ಕೋಟಿಯ ಪ್ರತ್ಯೇಕ ಯೋಜನೆಯ ಪ್ರಸ್ತಾವ ಸಿದ್ದಪಡಿಸಿದ್ದರು. ಇದಕ್ಕೆ ಸರ್ಕಾರ ಇನ್ನೂ ಮಂಜೂರಾತಿ ನೀಡಿಲ್ಲ.
‘ಒಂದೂವರೆ ತಿಂಗಳಿಂದ ನೀರು ಹರಿಸುತ್ತಿದ್ದರೂ ತಳಕಲ್ಲು ಕೆರೆಯಲ್ಲಿ ನೀರು ಸಂಗ್ರಹವಾಗಿಲ್ಲ. ಶಾಸಕರು ₹27 ಕೋಟಿಯ ಪ್ರತ್ಯೇಕ ಯೋಜನೆಗೆ ಮಂಜೂರಾತಿ ದೊರಕಿಸಬೇಕು, ಇಲ್ಲವೇ ನೀರು ಕಳ್ಳತನ ತಡೆಗಟ್ಟಿ ಕೆರೆಗೆ ನೀರು ಹರಿಸಬೇಕು’ ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಎಸ್.ಚಂದ್ರಪ್ಪ ಆಗ್ರಹಿಸಿದ್ದಾರೆ.
ಪೈಪ್‌ಲೈನ್ ಮಾರ್ಗ ಪರಿಶೀಲನೆ ನಡೆಸಿ ಸೋರಿಕೆ ತಡೆಗಟ್ಟುತ್ತೇವೆ. ಉದ್ದೇಶಪೂರ್ವಕವಾಗಿ ರಂಧ್ರ ಕೊರೆದವರ ಮೇಲೆ ಕ್ರಮ ಜರುಗಿಸುತ್ತೇವೆರಾಘವೇಂದ್ರ ಎಇಇ ಸಿಂಗಟಾಲೂರು ಏತ ನೀರಾವರಿ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.