ಕೂಡ್ಲಿಗಿ (ವಿಜಯನಗರ ಜಿಲ್ಲೆ): ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು, ಅನುದಾನ ಬಿಡುಗಡೆಗೆ ಶ್ರಮಿಸಿದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸೋಮವಾರ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಪಟ್ಟಣದ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗೋಪಾಲಕೃಷ್ಣ ಅವರನ್ನು ಬರಮಾಡಿಕೊಂಡ ಅವರ ಬೆಂಬಲಿಗರು, ರೈತರು ನಂತರ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು.
ಸಂಪೂರ್ಣ ಮಳೆಯಾಶ್ರಿತ ತಾಲ್ಲೂಕು ಆಗಿರುವ ಕೂಡ್ಲಿಗಿ ವ್ಯಾಪ್ತಿಯ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸಿ, ಕುಡಿಯುವ ನೀರು, ರೈತರ ಗದ್ದೆಗಳಿಗೆ ನೀರು ಹರಿಸಬೇಕು ಎನ್ನುವುದು ದಶಕಗಳ ಬೇಡಿಕೆಯಾಗಿತ್ತು. ಅದಕ್ಕಾಗಿ ಗೋಪಾಲಕೃಷ್ಣ ಅವರು ಸತತವಾಗಿ ಸರ್ಕಾರದ ಮೇಲೆ ಒತ್ತಡ ಹೇರಿ, ಕೊನೆಗೂ ಯೋಜನೆಗೆ ಒಪ್ಪಿಗೆ ಪಡೆಯಲು ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಿ, ₹670 ಕೋಟಿ ಸರ್ಕಾರ ಮಂಜೂರು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.