ADVERTISEMENT

ಹಂಪಿ ಉತ್ಸವ | ‘ವಿಜಯನಗರ ಅಧ್ಯಯನ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 8:40 IST
Last Updated 2 ಮಾರ್ಚ್ 2025, 8:40 IST
   

ಹಂಪಿ (ವಿಜಯನಗರ): ಪ್ರವಾಹ ತಡೆಯಲು ಕಬ್ಬಿಣದ ಬಳಕೆ, ವಿಶೇಷ ವಿನ್ಯಾಸ, ಸ್ಥಳೀಯ ಲಭ್ಯ ಕಲ್ಲು ಜೋಡಣೆ ಸೇರಿದಂತೆ ವಿವಿಧ ಜಾಣ್ಮೆ ಅನುಸರಿಸಿದ ವಿಜಯನಗರ ಕಾಲದ ನೀರಾವರಿ ವ್ಯವಸ್ಥೆ ಈಗಲೂ ಮಾದರಿಯಾಗಿದ್ದು ಇದರ ಬಗ್ಗೆ ಗಂಭೀರ ಅಧ್ಯಯನ ನಡೆಯಬೇಕಿದೆ ಎಂದು ಪಾರಂಪರಿಕ ಜಲಸಂರಕ್ಷಣೆ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಅಭಿಪ್ರಾಯಪಟ್ಟರು.

ಏಳು ಶತಮಾನಗಳು ಕಳೆದರೂ ಈವರೆಗೆ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿ ಇರುವ ಬೆಲ್ಲದ ಕಾಲುವೆ, ರಾಯ, ತುರ್ತಾ, ಬಸವಣ್ಣ, ಬಿಚ್ಚಾಲಿ ಕಾಲುವೆಗಳನ್ನು ತುಸು ಅಭಿವೃದ್ಧಿಪಡಿಸಿದರೆ, ಸಾವಿರಾರು ಎಕರೆ ಪ್ರದೇಶಕ್ಕೆ ಈಗಲೂ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಅವರು ಸಲಹೆ ಮಾಡಿದರು.

'ಹಂಪಿ ಉತ್ಸವ-2025'ರ ಅಂಗವಾಗಿ, ಕಮಲಮಹಲ್ ಬಳಿಯಿರುವ ಪುರಾತತ್ತ್ವ ಕಚೇರಿ ಆವರಣದಲ್ಲಿ ಭಾನುವಾರ ನಡೆದ 'ವಿಜಯನಗರ ಅಧ್ಯಯನ' ಕುರಿತ ವಿಚಾರ ಸಂಕಿರಣದಲ್ಲಿ ಅವರು 'ವಿಜಯನಗರ ಕಾಲದ ಅಣೆಕಟ್ಟು, ಕಾಲುವೆಗಳ ಇತಿಹಾಸ ವೈಶಿಷ್ಟ್ಯ ಹಾಗೂ ಉಪಯುಕ್ತತೆ' ಕುರಿತು ಅವರು ಮಾತನಾಡಿದರು.

ADVERTISEMENT

ವಿಜಯನಗರ ಕಾಲದ ಕಾಲುವೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಶಾಸನ ಲಭ್ಯವಿಲ್ಲ. ಸಿಕ್ಕಿರುವ ಶಾಸನಗಳನ್ನು ಆಧರಿಸಿ, ವಿಶ್ಲೇಷಿಸಿದರೆ, ಆ ಕಾಲದಲ್ಲಿ ನೀರಾವರಿಗೆ ನೀಡಿದ ಆದ್ಯತೆ ಗೊತ್ತಾಗುತ್ತದೆ. ಅಂಥ ಇತಿಹಾಸ ಪ್ರಸಿದ್ಧ ಕಾಲುವೆಗಳನ್ನು ಸಂರಕ್ಷಿಸಿ, ಈಗಲೂ ಬಳಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಈ ಕಾಲುವೆಗಳು ನಗರಕ್ಕೆ ಅಂಟಿಕೊಂಡಿವೆ. ಇದು ಅಪಾಯಕಾರಿ ಹಾದಿ ತೆರೆದಂತಾಗಿದೆ. ನಗರ ವಾಸಿಗಳು ಕಾಲುವೆಗಳಿಗೆ ತ್ಯಾಜ್ಯ ಎಸೆದು, ಮಲಿನ ಮಾಡುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ಕಾಲುವೆಗಳ ಮಹಾಜಾಲದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದ ಅವರು, ಸ್ಮಾರಕವೆಂದರೆ ಬರೀ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲ. ಅದರ ಜತೆಗೆ ಜೀವಂತ ಸ್ಮಾರಕಗಳಾದ ಕಾಲುವೆಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ವಿಜಯನಗರದ ವಿವಿಧ ಸಂಗತಿಗಳ ಅಧ್ಯಯನ ಕುರಿತು ರಾಕೇಶ್ ಬಿ.ಸಿ., ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ, ಶರಣಬಸವ, ಮಂಜಣ್ಣ ಪಿ.ಬಿ., ಯೋಗಾನಂದ ಎಸ್.ಕೆ., ನರಸಿಂಹ ತಳವಾರ, ಪಿ.‌ಯಶೋದಾ ಹಾಗೂ ಪ್ರೊ. ಟಿ. ಮುರುಗೇಶಿ ಪ್ರಬಂಧ ಮಂಡಿಸಿದರು.

ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.

ಪುರಾತತ್ವ ಇಲಾಖೆ ಅಧಿಕಾರಿಗಳಾದ ಆರ್. ಶೇಜೇಶ್ವರ್ ಹಾಗೂ ಮಂಜಾ ನಾಯ್ಕ ಉಪಸ್ಥಿತರಿದ್ದರು.

ಸಾಳ್ವ, ಅರವೀಡು ವಂಶ: ಹೆಚ್ಚಿನ ಅಧ್ಯಯನ ಅಗತ್ಯ

‘ವಿಜಯನಗರ ಸಾಮ್ರಾಜ್ಯದ ಅವನತಿ ಕುರಿತು ಇತಿಹಾಸಕಾರರಲ್ಲಿ ಸ್ಪಷ್ಟತೆ ಮೂಡಲು ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳುವ ಅಗತ್ಯವಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಶನಿವಾರ 27ನೇ ವಾರ್ಷಿಕ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ತುಳು, ಸಾಳ್ವ ಹಾಗೂ ಅರವೀಡು ವಂಶಗಳು ಆಳ್ವಿಕೆ ಮಾಡಿವೆ. ಇ‌ದುವರೆಗೂ ಸಂಗಮ ಹಾಗೂ ತುಳು ವಂಶಗಳ ಅರಸರ ಕೊಡುಗೆ ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿವೆ. ಆದರೆ ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ವ್ಯಾಪಕ ಅಧ್ಯಯನಗಳು ನಡೆದಿಲ್ಲ. ವಿಜಯನಗರ ಕುರಿತು ಈವರೆಗೂ ನಡೆದ ಸಂಶೋಧನೆಗಳ ಪುನರ್ ಅಧ್ಯಯದ ಅವಶ್ಯಕತೆಯಿದೆ. ವಸ್ತುನಿಷ್ಠ, ಬಹುತ್ವ ಹಾಗೂ ವಿಶಾಲ ದೃಷ್ಠಿಕೋನದಿಂದ ಅಧ್ಯಯನವಾಗಬೇಕಿದೆ ಎಂದರು.

‘ಇತಿಹಾಸಕಾರರು ಅರವೀಡು ವಂಶದ ಆಡಳಿತಾಗರರ ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಅರವೀಡು ವಂಶಜರು ಆಂದ್ರ ಪ್ರದೇಶದ ಕರ್ನೂಲು ಮೂಲದವರು, ಇವರ ಆಡಳಿತ ಕರ್ನಾಟಕ, ಆಂದ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಂಚಿಕೆಯಾಗಿತ್ತು. ರಕ್ಕಸತಂಗಡಿ ಯುದ್ದದಲ್ಲಿ ಸಾಮ್ಯಾಜ್ಯ ರಕ್ಷಣೆಗಿಂತ ತಮ್ಮ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆ ಪ್ರಾಮುಖ್ಯತೆ ನೀಡಿದರು ಎಂಬ ಭಾವನೆಯಿದೆ. ಅರವೀಡು ವಂಶದ ಅಧ್ಯಯನಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಹಿತ್ಯ ಹಾಗೂ ಐತಿಹ್ಯಗಳನ್ನು ಒಗ್ಗೂಡಿಸಿ ಸಂಶೋಧನೆ ಮಾಡಬೇಕಿದೆ. ಇದು ಬಹು ಭಾಷೆಯ ಜ್ಞಾನ ಇಲ್ಲದ ಇತಿಹಾಸಕಾರಿಗೆ ತೊಡಕಾಗಿ ಪರಿಣಮಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ತಾತಪಿನ್ನಮ, ಸೋಮಿದೇವ, ರಾಘವದೇವ, 2ನೇ ಪಿನ್ನಮ, ಅರವೀಡು ಬುಕ್ಕ, ಅರವೀಡು ರಾಮರಾಜ, ಶ್ರೀರಂಗರಾಜ, ತಿರುಮಲ ಹಾಗೂ ಅಳಿಯ ರಾಮರಾಯ ಅರವೀಡು ವಂಶಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ತಿರುಮಲ, ಕೃಷ್ಣ ದೇವರಾಯನ ಅಳಿಯನಾಗಿದ್ದು, ರಕ್ಕಸತಂಗಡಿ ಯುದ್ದದ ಬಳಿಕ ಹರಿದು ಹೊಂಚಿಹೋದ ಪ್ರದೇಶಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ. ಸಾಮ್ರಾಜ್ಯ ವಿಸ್ತರಣೆ ಮಾಡಿದ’ ಎಂದು ಕುಲಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.