ADVERTISEMENT

ಹಂಪಿಯಲ್ಲಿ ಯೋಗ ಉತ್ಸವ; ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 10:16 IST
Last Updated 27 ಏಪ್ರಿಲ್ 2022, 10:16 IST
   

ಹೊಸಪೇಟೆ (ವಿಜಯನಗರ): ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳಲ್ಲಿ ಯೋಗ ಉತ್ಸವ ಸಂಘಟಿಸುವುದರ ಬಗ್ಗೆ ಚಿಂತನೆ ನಡೆದಿದೆ’ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ತಿಳಿಸಿದರು.

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರೊಂದಿಗೆ ಬುಧವಾರ ಹಂಪಿಯ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದರು.

ಈ ಸಲ ರಾಜ್ಯಮಟ್ಟದ ಯೋಗ ದಿನಾಚರಣೆ ಹಂಪಿಯಲ್ಲಿ ಆಯೋಜಿಸುವುದರ ಬಗ್ಗೆ ಸಚಿವರೊಂದಿಗೆ ಚರ್ಚಿಸಲಾಗಿದೆ. ಹಂಪಿಯ ಸ್ಮಾರಕಗಳಾದ ವಿಜಯ ವಿಠ್ಠಲ ದೇವಸ್ಥಾನ, ಕಮಲ ಮಹಲ್‌, ವಿರೂಪಾಕ್ಷೇಶ್ವರ ದೇವಾಲಯ, ಆನೆಸಾಲು ಮಂಟಪ, ಉಗ್ರನರಸಿಂಹ ಸ್ಮಾರಕದ ಪರಿಸರದಲ್ಲಿ ಯೋಗ ಉತ್ಸವ ಹಮ್ಮಿಕೊಳ್ಳುವ ಯೋಜನೆ ಇದೆ. ಅದಕ್ಕಾಗಿಯೇ ಎಲ್ಲ ಸ್ಮಾರಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

ADVERTISEMENT

ಅಂಜನಾದ್ರಿ, ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಈಗಾಗಲೇ ಯೋಗ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲಾಗಿದೆ. ಬರುವ ದಿನಗಳಲ್ಲಿ ಹಂಪಿಯಲ್ಲೂ ಕೂಡ ಯಶಸ್ವಿಯಾಗಿ ಸಂಘಟಿಸಲಾಗುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಂಪಿ ಖ್ಯಾತಿ ಗಳಿಸಿದೆ. ಯೋಗಕ್ಕೂ ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿರುವುದರಿಂದ ಹಂಪಿಯಲ್ಲಿ ಆಚರಿಸುವುದು ಸಮಯೋಚಿತ ಎಂದರು.
ಸಚಿವ ಆನಂದ್‌ ಸಿಂಗ್‌ ಮಾತನಾಡಿ, ಹಂಪಿಯಲ್ಲಿ ಯೋಗ ಉತ್ಸವ ನಡೆಸುವುದರ ಬಗ್ಗೆ ರಾಜ್ಯದ ಪ್ರಮುಖ ಯೋಗ ಪ್ರಚಾರಕರು, ವಚನಾನಂದ ಸ್ವಾಮೀಜಿ ಜೊತೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಬರುವ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ತಯಾರಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಧುರ ಚೆನ್ನಶಾಸ್ತ್ರಿ, ರಘು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.