ADVERTISEMENT

ಧರ್ಮ, ಸಂಸ್ಕೃತಿ ದೇಶದ ಅಭಿವೃದ್ಧಿಯ ಕಣ್ಣುಗಳು: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 15:52 IST
Last Updated 5 ಅಕ್ಟೋಬರ್ 2025, 15:52 IST
   

ಹೊಸಪೇಟೆ (ವಿಜಯನಗರ): ‘ಧರ್ಮ ಮತ್ತು ಸಂಸ್ಕೃತಿ ದೇಶದ ಅಭಿವೃದ್ಧಿಯ ಎರಡು ಕಣ್ಣುಗಳಿದ್ದಂತೆ. ಧರ್ಮದ ಅಡಿಯಲ್ಲಿ ಸಂವಿಧಾನವು ಪೂರಕವಾಗಿರುತ್ತದೆ. ನಮ್ಮನ್ನು ಆಳುವವರು ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಂಡಾಗ ನಮಗೆ ಅರಿವಿಲ್ಲದಂತೆ ಧರ್ಮವು ಅಭಿವೃದ್ಧಿಗೊಂಡಿರುತ್ತದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.

‘ರಾಗಂ’ ಎಂದೇ ಪರಿಚಿತರಾದ ರಾಜಶೇಖರ ಮಠಪತಿ ಅವರು ರಾಷ್ಟ್ರಸಂತ ಸಿದ್ದೇಶ್ವರ ಶ್ರೀಗಳ ಕುರಿತು ರಚಿಸಿರುವ ‘ಯೋಗಸ್ಥಃ ಸಂತೆಯಿಂದ ಸಂತನೆಡೆಗೆ’ ಕೃತಿಯ ಇಂಗ್ಲಿಷ್‌, ಹಿಂದಿ ಮತ್ತು ತೆಲುಗು ಆವೃತ್ತಿಗಳನ್ನು ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಸಂವಿಧಾನದ ಅಧ್ಯಾಯ 5ಎ ಮೂಲಭೂತ ಕರ್ತವ್ಯಗಳನ್ನು ವಿವರಿಸುತ್ತದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದು ಅದರಲ್ಲಿ ತಿಳಿಸಲಾಗಿದೆ. ನಮ್ಮ ಸಾವಿರಾರು ವರ್ಷಗಳ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಅದ್ಯತೆಯಾಗಿದೆ. ರೈತನಿರಲಿ, ವೈದ್ಯನಿರಲಿ, ತಾನು ಮಾಡುವ ಕೆಲಸದಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು. ತಮ್ಮ ಭವಿಷ್ಯ ಏನಾಗಿರಬೇಕು ಎಂಬುದನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಮಾನವನಿಗಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಹೇಳಿದರು.

ADVERTISEMENT

‘ಬರಹ ಎಂಬುದು ತಪಸ್ಸಿದ್ದಂತೆ. ಬರಹಗಾರರು ನಿರಂತರವಾಗಿ ಬರೆಯುತ್ತಿರಬೇಕು. ಆಗ ಉತ್ತಮವಾದ ಕೃತಿಗಳು ಹೊರಬರಲಿಕ್ಕೆ ಸಾಧ್ಯವಾಗುತ್ತದೆ. ರಾಗಂ ಅವರ ಯೋಗಸ್ಥಃ ಕೃತಿಯ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಿದ್ದೆ. ಈ ಮೂಲಕ ಸಿದ್ದೇಶ್ವರ ಪೂಜ್ಯರನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳುವಂತಾಗಿದೆ’ ಎಂದರು.

ರಾಗಂ ಅವರ ಕೃತಿಯಲ್ಲಿ ನಾಗರಿಕತೆ ಎಂದರೇನು ಎಂಬುದನ್ನು ವಿವರಿಸಿದ್ದಾರೆ. ತಂದೆ ತಾಯಿ ಗುರು ಹಿರಿಯರನ್ನು ಪ್ರತಿನಿತ್ಯ ನೆನೆಯುತ್ತೇವೆ. ದೇವರು ಕಾಣಲು ಗುರು ನಮಗೆ ಸಾಧನ. ಗುರುವಿನ ಮಾರ್ಗದಲ್ಲಿ ನಡೆಯಬೇಕು ಎಂಬುದನ್ನು ಈ ಪುಸ್ತಕ ತಿಳಿಸುತ್ತಿದೆ. ಇದರರಲ್ಲಿ ಆಧ್ಯಾತ್ಮದ ಅರಿವಿದೆ ಎಂದು ಅವರು ಹೇಳಿದರು.

ಲೇಖಕ ರಾಗಂ ಮಾತನಾಡಿ, ‘ಈ ಕೃತಿಯಗಳನ್ನು ಕನಿಷ್ಠ 12 ಲಕ್ಷ ಜನರಿಗೆ ತಲುಪಿಸುವ ಗುರಿ ಹೊಂದಿದ್ದೇವೆ. ಕನಿಷ್ಠ 5 ಭಾಷೆಗೆ ಅನುವಾದಗೊಂಡು ಓದುಗರಿಗೆ ಸಿಗಬೇಕೆನ್ನುವ ಸಂಕಲ್ಪ ನಮಗಿದೆ’ ಎಂದರು.

ಶಾಸಕಿ ಅನ್ನಪೂರ್ಣಾ ತುಕಾರಾಂ ಮಾತನಾಡಿದರು. ಶರಣಬಸವೇಶ್ವರ ದಾಸೋಹ ಮಠದ ಐಮಡಿ ಶರಣಾರ್ಯರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ 18 ಸಾಧಕರನ್ನು ಸನ್ಮಾನಿಸಲಾಯಿತು. 

ಕನ್ನಡ ಸರಸ್ವತ ಲೋಕದ ಸಾಧಕರಾದ ಎಸ್‌.ಎಲ್‌.ಭೈರಪ್ಪ, ಮೊಗಳ್ಳಿ ಗಣೇಶ್, ರಂಗಭೂಮಿಯ ಸಾಧಕರಾದ ಯಶವಂತ ಸರದೇಶಪಾಂಡೆ, ಹನುಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಭೀಮರಾವ್ ಕುಲಕರ್ಣಿ, ಹಿಂದಿಗೆ ಅನುವಾದಿಸಿದ ಶ್ರವಣ ಕುಮಾರ್ ಬರೂರ್ಕರ್, ತೆಲುಗು ಭಾಷೆಗೆ ಅನುವಾದಿಸಿದ ಪೃಥ್ವಿರಾಜ್ ರಾಂಪುರ, ಬೆಂಗಳೂರಿನ ಅಧ್ಯಾತ್ಮ ಚಿಂತಕ ಜಂಬುನಾಥ್ ಮಳಿಮಠ ದಿವ್ಯ,  ಜೆ.ಎಂ.ಅನಿಲ್ ಕುಮಾರ್, ರಾಮಲಿಂಗಪ್ಪ, ಮಲ್ಲಿಕಾರ್ಜುನ ಕೆ. ರಮೇಶ್ ಬಾಬು ಪೋತರೆಡ್ಡಿ, ಈಶ್ವರ ನಾಯಕ್ ವೀರಭದ್ರಗೌಡ, ರಾಜು ಡಿ.ಎನ್‌., ಪ್ರವೀಣ್ ಕುಮಾರ, ಮಧುಕುಮಾರ, ದಿವಾಕರ ನಾರಾಯಣ, ಸುನಿಲ ಯಾಪಲದಿನ್ನಿ, ವಿರೂಪಾಕ್ಷಯ್ಯ ಇದ್ದರು.

ನಗರದ ಶ್ರೀ ಸಿದ್ದೇಶ್ವರ ಸೇವಾ ಸಮಿತಿ ಮತ್ತು ಬೆಂಗಳೂರಿನ ಪಿ.ಆರ್. ಪಬ್ಲಿಕೇಷನ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.