ADVERTISEMENT

ತಂದೆ–ತಾಯಿ ಪುನರ್ ವಿವಾಹಕ್ಕೆ ಸಾಕ್ಷಿಯಾದ ಪುತ್ರ!

ಎ.ಸಿ.ಪಾಟೀಲ
Published 13 ಅಕ್ಟೋಬರ್ 2017, 10:05 IST
Last Updated 13 ಅಕ್ಟೋಬರ್ 2017, 10:05 IST
ಇಂಡಿ ತಾಲ್ಲೂಕು ಸಾತಲಗಾಂವ ಗ್ರಾಮದ ಲಿಂಗಾಯತ ಸಮುದಾಯದ ಯುವಕ, ಮುಸ್ಲಿಂ ಧರ್ಮದ ಯುವತಿ ಮಧ್ಯ ಮಂಗಳವಾರ ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಎರಡು ಕುಟುಂಬದ ಸಮ್ಮುಖದಲ್ಲಿ ಪುನರ್‌ ವಿವಾಹ ಜರುಗಿತು
ಇಂಡಿ ತಾಲ್ಲೂಕು ಸಾತಲಗಾಂವ ಗ್ರಾಮದ ಲಿಂಗಾಯತ ಸಮುದಾಯದ ಯುವಕ, ಮುಸ್ಲಿಂ ಧರ್ಮದ ಯುವತಿ ಮಧ್ಯ ಮಂಗಳವಾರ ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಎರಡು ಕುಟುಂಬದ ಸಮ್ಮುಖದಲ್ಲಿ ಪುನರ್‌ ವಿವಾಹ ಜರುಗಿತು   

ಇಂಡಿ: ಪ್ರೌಢಾವಸ್ಥೆಯಲ್ಲಿ ಮನದಲ್ಲಿ ಮೊಳೆತ ಪ್ರೀತಿಯ ಉಳಿವಿಗಾಗಿ ಊರು ತೊರೆದಿದ್ದ, ಯುವ ಜೋಡಿ ಪುತ್ರನೊಂದಿಗೆ ಮರಳಿ ಹೆತ್ತವರ ಸಮ್ಮುಖ ಪುನರ್‌ ವಿವಾಹವಾಗಿದ್ದಾರೆ. ತಾಲ್ಲೂಕಿನ ಸಾತಲಗಾಂವ ಗ್ರಾಮದ ಲಿಂಗಾಯತ ಸಮುದಾಯದ ರವಿಕಾಂತ ಮಸಬಿನಾಳ, ಮುಸ್ಲಿಂ ಧರ್ಮದ ಜೀವನ್‌ ತಡ್ಲಗಿ ಜೋಡಿ ಮಹಿಳಾ ಸಾಂತ್ವನ ಕೇಂದ್ರದ ಸಹಕಾರದೊಂದಿಗೆ ಹೆತ್ತವರ ಸಮ್ಮುಖದಲ್ಲಿ ಗುರುವಾರ ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಎರಡು ವರ್ಷದ ಪುತ್ರನ ಸಾಕ್ಷಿಯಾಗಿ ಪುನರ್ ವಿವಾಹ ಆಗಿ, ಹೊಸ ಜೀವನಕ್ಕೆ ಕಾಲಿಟ್ಟರು.

ಒಂದೇ ಗ್ರಾಮದಲ್ಲಿ ವಾಸವಾಗಿದ್ದ ರವಿಕಾಂತ, ಜೀವನ್‌ ಬಾಲ್ಯದಿಂದಲೇ ಸ್ನೇಹಿತರಾಗಿದ್ದ ಅವರು ಕೂಡಿ ಆಡುತ್ತಿದ್ದರು. ನಂತರ ಇಬ್ಬರಲ್ಲಿ ಪ್ರೀತಿ ಮೊಳಕೆ ಒಡೆದು ಮದುವೆಯಾಗಲು ನಿರ್ಧರಿಸಿದ್ದಾರೆ.

ಆದರೆ, ಇಬ್ಬರು ಬೇರೆ ಬೇರೆ ಧರ್ಮದವರಾಗಿದ್ದರಿಂದ ಮನೆಯವರು ತಮ್ಮ ಮದುವೆಗೆ ಒಪ್ಪಿಕೊಳ್ಳೂತ್ತಾರೋ ಇಲ್ಲ ಎಂಬ ಭಯದಿಂದ, ತಮ್ಮ ಪ್ರೀತಿ ಬಗ್ಗೆ ತಮ್ಮ ಹೆತ್ತವರಿಗೆ ಹೇಳಿಕೊಳ್ಳಲಾಗದೇ, ಐದು ವರ್ಷಗಳ ಹಿಂದೆ ಊರು ತೊರೆದು ಮಹಾರಾಷ್ಟ್ರದ ಪುನಾಕ್ಕೆ ತೆರಳಿ ಸುಖ ಸಂಸಾರ ನಡೆಸಿದರು. ತಮ್ಮ ಪ್ರೀತಿಗೆ ಎರಡು ವರ್ಷದ ಗಂಡು ಮಗು ಸಾಕ್ಷಿಯಾಗಿದ್ದಾನೆ.

ADVERTISEMENT

ಐದು ವರ್ಷ ಹೆತ್ತವರನ್ನು ಬಿಟ್ಟು ದೂರವಾಗಿ ಮರಗುತ್ತಿದ್ದ ಜೋಡಿ, ಹೆತ್ತವರು ತಮ್ಮ ತಪ್ಪನ್ನು ಮನ್ನಿಸಿ ಸ್ವೀಕರಿಸುತ್ತಾರೆ ಎಂಬ ಆಸೆಯೊಂದಿಗೆ, ಎರಡು ವರ್ಷದ ಪುತ್ರನೊಂದಿಗೆ ಮರಳಿ ಆರು ತಿಂಗಳ ಹಿಂದೆ ಹುಟ್ಟೂರು ಸಾತಲಗಾಂವಗೆ ಆಗಮಿಸಿದ್ದರು.

ಆದರೆ, ಎಷ್ಟೇ ಮನವೊಲಿಸಿದರೂ ಎರಡು ಕುಟುಂಬಗಳು ಇವರ ಮದುವೆ ಒಪ್ಪಿಕೊಂಡಿರಲಿಲ್ಲ. ಗ್ರಾಮಸ್ಥರೂ ಸಹ ವಕ್ರ ದೃಷ್ಟಿಯಿಂದ ನೋಡುತ್ತಿದ್ದರು. ಇದಕ್ಕೆ ಮಾನಸಿಕವಾಗಿ ನೊಂದ ಪ್ರೇಮಿಗಳು, ಅನಿವಾರ್ಯವಾಗಿ ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಸಾಂತ್ವನ ಕೇಂದ್ರದ ಮೇಲ್ವಿಚಾರಕಿಯರು ಎರಡೂ ಕುಟುಂಬಗಳ ಮನವೊಲಿಸಿ, ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ಮಾಡಿಸುವಲ್ಲಿ ಸಫಲರಾಗಿದ್ದಾರೆ.

ಬಾಲ್ಯದಿಂದಲೂ ಪ್ರೀತಿಸುತ್ತಿರುವ ಯುವತಿ ಜೀವನ್ ಅವಳಿಗೆ 18 ವರ್ಷ, ಯುವಕ ರವಿಕಾಂತಗೆ 21 ವರ್ಷ ತುಂಬಿರುವದರಿಂದ ಕಾನೂನಿನ ಪ್ರಕಾರ ಯಾವುದೇ ಸಮಸ್ಯೆಯಯಾಗುವುದಿಲ್ಲ ಎಂಬುವುದನ್ನು ಅರಿತು, ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಲಾಯಿತು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಗೋರ್ವದನ ಬಿ.ಸಿ ಪ್ರಜಾವಾಣಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.