ADVERTISEMENT

ಧರ್ಮ ಒಡೆಯುವರು ನಾಶ: ಕಾಶಿ ಶ್ರೀ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 7:02 IST
Last Updated 10 ಡಿಸೆಂಬರ್ 2017, 7:02 IST
ಮುದ್ದೇಬಿಹಾಳದಲ್ಲಿ ಶುಕ್ರವಾರ ನಡೆದ ಅಷ್ಟಾವರಣ ಆಚರಣೆ ಅರಿವು ಕಾರ್ಯಾಗಾರವನ್ನು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು
ಮುದ್ದೇಬಿಹಾಳದಲ್ಲಿ ಶುಕ್ರವಾರ ನಡೆದ ಅಷ್ಟಾವರಣ ಆಚರಣೆ ಅರಿವು ಕಾರ್ಯಾಗಾರವನ್ನು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು   

ಮುದ್ದೇಬಿಹಾಳ: ಮೀಸಲಾತಿಗೋಸ್ಕರ ಧರ್ಮ ಒಡೆಯುವುದು ಅತ್ಯಂತ ಹೀನ ಕಾರ್ಯ. ಧರ್ಮ ಒಡೆಯಲು ಯತ್ನಿಸುವವರು ನಾಶವಾಗಿ ಹೋಗ್ತಾರೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ದಾಸೋಹ ಭವನದಲ್ಲಿ ಶುಕ್ರವಾರ ಸಂಗಯ್ಯ ಹಾಲಗಂಗಾಧರಮಠ ನೆರಬೆಂಚಿ ನೇತೃತ್ವದಲ್ಲಿ ಏರ್ಪಡಿಸಿದ್ದ ಅಷ್ಟಾವರಣಗಳ ಆಚರಣೆ ಅರಿವು ಕಾರ್ಯಾಗಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ರಾಜಕೀಯ ಲಾಭ ಕ್ಕಾಗಿ ನಡೆಸಿರುವ ಪ್ರಯತ್ನ ಎಂದು ಹೇಳಿದರು.

ಲಿಂಗಾಯತ ಧರ್ಮ ಬಸವಣ್ಣ ಸ್ಥಾಪಿಸಿದ್ದಲ್ಲ. ಲಿಂಗಾಯತ ಪದ ವೀರಶೈವ ಪದಕ್ಕೆ ಪರ್ಯಾಯವೇ ಹೊರತೂ ಪ್ರತ್ಯೇಕ ಧರ್ಮ ಅಲ್ಲವೇ ಅಲ್ಲ. ಇವೆರಡೂ ಪದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ನಾಣ್ಯವನ್ನು ಇಬ್ಭಾಗ ಮಾಡಿದರೆ ಅದು ಮೌಲ್ಯ ಕಳೆದುಕೊಳ್ಳುತ್ತದೆ. ಅದರಂತೆ ಲಿಂಗಾಯತವನ್ನು ವೀರಶೈವದಿಂದ ಪ್ರತ್ಯೇಕಿಸಿದರೆ ಅದೂ ಸಹಿತ ಮೌಲ್ಯ ಕಳೆದುಕೊಳ್ಳುತ್ತದೆ ಎಂದು ಹೇಳಿದರು.

ADVERTISEMENT

ವೀರಶೈವ ಸನಾತನ ಧರ್ಮ. ಮನುಕುಲದ ಉದ್ಧಾರಕ್ಕಾಗಿ ಸ್ಥಾಪಿತಗೊಂಡಿದೆ. ಲಿಂಗ ಧರಿಸಿದವ ವೀರಶೈವ ಅನ್ನೋದನ್ನ ವ್ಯಾಸ ಮಹರ್ಷಿಗಳೇ ಕಂದ ಪುರಾಣದಲ್ಲಿ ಹೇಳಿದ್ದಾರೆ.

ಸ್ವತ: ಬಸವಣ್ಣನೇ ತನ್ನ ವಚನಗಳಲ್ಲಿ ತಾನು ವೀರಶೈವನಾದೆ ಎಂದಿದ್ದಾರೆ ಹೊರತು, ಎಲ್ಲಿಯೂ ತಾನೊಬ್ಬ ಲಿಂಗಾಯತ ಎಂದು ಹೇಳಿಕೊಂಡಿಲ್ಲ ಎಂದರು.

ಡಿ.24 ರಂದು ಗದಗನಲ್ಲಿ ವೀರಶೈವ ಲಿಂಗಾಯತ ಧರ್ಮೀಯರ ಮಹಾ ಸಮಾವೇಶ, ಬರುವ ಜೂನ್ ತಿಂಗಳಲ್ಲಿ ಮುದ್ದೇಬಿಹಾಳದಲ್ಲಿ 11 ದಿನಗಳ ಕಾರ್ಯಾಗಾರ ಆಯೋಜಿ ಸಲಾಗಿದೆ. ಇವೆರಡೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಇದೇ ವೇಳೆ ಶ್ರೀಗಳು ಕರೆ ನೀಡಿದರು.

ಬಿಲ್‌ಕೆರೂರು ಬಿಲ್ವಾಶ್ರಮ ಹಿರೇಮಠದ ಸಿದ್ದಲಿಂಗ ಶಿವಾ ಚಾರ್ಯರ, ಗುರು, ಲಿಂಗ, ಜಂಗಮ ಕುರಿತು, ಶಿವಮೊಗ್ಗ ಜಿಲ್ಲೆ ಮಳಲಿಮಠದ ಗುರು ನಾಗಭೂಷಣ ಶಿವಾಚಾರ್ಯರು, ವಿಭೂತಿ, ರುದ್ರಾಕ್ಷಿ ಕುರಿತು, ಇಟಗಿ ಭೂಕೈಲಾಸ ಮೇಲುಗದ್ದಿಗೆಮಠದ ಗುರು ಶಾಂತಲಿಂಗ ಶಿವಾಚಾರ್ಯರು ಮಂತ್ರ, ಢವಳಗಿ ಗದ್ದುಗೆಮಠದ ಘನಮಠೇಶ್ವರ ಸ್ವಾಮಿಗಳು ಪಾದೋದಕ, ಪ್ರಸಾದ ಕುರಿತು ಮಾತನಾಡಿದರು. ಹಿರೂರಿನ ಗುರು ಜಯಸಿದ್ದೇಶ್ವರ ಶಿವಾಚಾರ್ಯರ, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರ, ಮುತ್ತಗಿ ಪಿ.ಎಸ್.ಹಿರೇಮಠ ಇದ್ದರು.

ಸಂಗಮೇಶ ಶಿವಣಗಿ ಸ್ವಾಗತ ಗೀತೆ ಹಾಡಿದರು. ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಸ್ವಾಗತಿಸಿದರು. ನೆರಬೆಂಚಿ ಸಂಗಯ್ಯ ಹಾಲಗಂಗಾಧರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ನಾಯಕ, ಎಸ್.ವಿ.ಹಿರೇಮಠ, ನಾಗಮ್ಮ ದಶವಂತ ನಿರೂಪಿಸಿದರು. ಮರುಳಸಿದ್ದಯ್ಯ ಗುರುವಿನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.