ADVERTISEMENT

ನಾಡದೇವಿ ಉತ್ಸವಕ್ಕೆ ಅದ್ದೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 9:35 IST
Last Updated 18 ಅಕ್ಟೋಬರ್ 2012, 9:35 IST

ಚಡಚಣ: ಸಮೀಪದ ಸಾವಳಸಂಗ ಗ್ರಾಮದಲ್ಲಿ ನವರಾತ್ರಿ ಉತ್ಸವಕ್ಕೆ  ಚಾಲನೆ ಹಾಗೂ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಅಂಬಾಭವಾನಿ ದೇವಾಲಯದ ಕಳಸಾರೋಹಣ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ಜರುಗಿತು.

ನಾಡದೇವಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿ.ಪಂ. ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ನಾಡದೇವಿ ಉತ್ಸವ ಸಮಾಜದಲ್ಲಿನ ದುಷ್ಟ ಸಂಹಾರ, ಶಿಷ್ಟ ರಕ್ಷಣೆ ಮಾಡಿ, ಎಲ್ಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ನಾಡದೇವಿ ನೀಡಲಿ ಎಂದರು.

ಪಿಎಸ್‌ಐ ಮಹಾದೇವ ಯಲಿಗಾರ ಮಾತನಾಡಿ, ಸಾಮಾಜಿಕ ಅನಿಷ್ಟಗಳನ್ನು ಅಳಿಸಿ, ಎಲ್ಲರಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಸೋದರತೆಯ ಭಾವನೆ ಮೂಡಿಸಲು ಈ ಉತ್ಸವ ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡದೇವಿ ಉತ್ಸವ ಸಮಿತಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಹಾಗೂ ತಾ.ಪಂ. ಮಾಜಿ ಬಾಬು ಚೌಹಾಣ, ನಾಡದೇವಿ ಉತ್ಸವದ ನಿಮಿತ್ತ ಹಮ್ಮಿಕೊಂಡಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಹತ್ತಳ್ಳಿ ಹಿರೇಮಠದ ಶ್ರೀ ಗುರು ಗುರುಪಾದೇಶ್ವರ ಶಿವಾಚಾರ್ಯ ಹಾಗೂ ಕಾತ್ರಾಳದ ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಮುಖಂಡರಾದ ಮಲ್ಲನಗೌಡ ಬಿರಾದಾರ, ಈರಣ್ಣ ಕೋರೆ, ಸೂರ‌್ಯಕಾಂತ ಗೋಠೆ, ಮಲ್ಲಪ್ಪ ಖೇಡ, ಮಲ್ಲಯ್ಯಾ ಮಠಪತಿ, ಗಣಪತಿ ಮೋರೆ, ಮಲ್ಲಪ್ಪ ಬ್ಯಾಗಳ್ಳಿ, ಶಿವಮೂರ್ತಿ ಮೆಡೆದಾರ, ಚಂದ್ರಶೇಖರ ಬಿರಾದಾರ, ನಿಂಗಯ್ಯಾ ಹಿರೇಮಠ, ಮುಖ್ಯ ಶಿಕ್ಷಕ ಬಿ.ವೈ. ಹಂಜಗಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಡದೇವಿ ಉತ್ಸವ ಸಮಿತಿ ಸಂಚಾಲಕ ಬಿ.ಎ. ಬಾಲಗಾಂವ ಕಾರ್ಯಕ್ರಮ ನಿರೂಪಿಸಿದರು.  ನಾಡದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಅಂಬಾಭವಾನಿ ದೇವಾಲಯದ ಕಳಸಾರೋಹಣ ನಿಮಿತ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಬೆಳಗಿನ ಜಾವ ಪೂರೈಸಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಹತ್ತಳ್ಳಿ ಹಿರೇಮಠದ ಶ್ರೀ ಗುರು ಗುರುಪಾದೇಶ್ವರ ಶಿವಾಚಾರ್ಯರು ವಹಿಸಿದ್ದರು.

ಕಳಸದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ಕುಂಭ ಹೊತ್ತ ನೂರಾರು ಮುತ್ತೈದೆಯರು, ಸಾವಿರಾರು ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.