ADVERTISEMENT

ರಮ್ಜಾನ್ ಸನ್ಮಾರ್ಗದ ದಾರಿ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 7:55 IST
Last Updated 2 ಆಗಸ್ಟ್ 2012, 7:55 IST

ವಿಜಾಪುರ: ರಮ್ಜಾನ್ ಮಾಸದ ಉಪವಾಸಕ್ಕೆ ಮಹತ್ವ ವಿದೆ. ದಾನ, ಪ್ರಾರ್ಥನೆ, ಉಪವಾಸ  ಹಾಗೂ ಹಜ್ ಯಾತ್ರೆಗಳಿಂದ ಮಾನವನಿಗೆ ಮೋಕ್ಷ ದೊರೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆಯಿಂದ ಇತ್ತೀಚೆಗೆ ಇಲ್ಲಿ ಸರ್ವಧರ್ಮೀಯರಿಗೆ ಏರ್ಪಡಿಸಿದ್ದ ಇಫ್ತಾರ ಕೂಟದಲ್ಲಿ ಮಾತನಾಡಿದರು.

ಪವಿತ್ರ ಕುರಾನ್‌ದಂತೆ ಇಸ್ಲಾಂ ಸಮಾಜ ಬಾಂಧವರು ಜೀವನ ಸಾಗಿಸುತ್ತಾರೆ. ಕುರಾನ್ ಮಾನವ ಕುಲಕ್ಕೆ ಮಾರ್ಗದರ್ಶನ ಮಾಡಿದೆ. 21ನೆಯ ಶತಮಾನದಲ್ಲಿಯೂ ಇದು ಮಾನವ ಧರ್ಮಕ್ಕೆ ಅರ್ಥಪೂರ್ಣ ಸಂದೇಶ ನೀಡುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಜರತ್ ಸಯ್ಯದ ಶಾ ಮುರ್ತುಜಾ ಹುಸೇನ ಹಾಸ್ಮಿ  ಮಾತನಾಡಿ, ಪವಿತ್ರ ರಮ್ಜಾನ್ ತಿಂಗಳ ಉಪವಾಸ ಮಾನವನಲ್ಲಿರುವ ಕ್ರೋಧ, ಅಸೂಯೆ, ಲೋಭ, ಮೋಹ, ಮದ, ಮತ್ಸರ, ಅಹಂಕಾರ ಮುಂತಾದ ದುಷ್ಟ ವಿಚಾರ ಗಳನ್ನು ನಾಶ ಮಾಡುತ್ತದೆ. ಇಸ್ಲಾಂ ಪರೋಪಕಾರ, ಸಹನೆ, ತಾಳ್ಮೆ, ತ್ಯಾಗ, ಪ್ರೀತಿಗೆ ಮಹತ್ವದ ನೀಡಿದೆ. ಇಂದು ಸರ್ವಧರ್ಮದವರೊಂದಿಗೆ ಸಹ ಭೋಜನ ಕೂಟ ಏರ್ಪಡಿಸಿದ್ದು ಭಾರತೀಯ ಸಾಮರಸ್ಯ ಸಮಾಜಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಶಾಸಕ ಎಂ.ಬಿ. ಪಾಟೀಲ, ಮಾಜಿ ಸಚಿವ ಕೆ. ಶಿವಮೂರ್ತಿ ಮಾತನಾಡಿದರು. ಮಾಜಿ ಶಾಸಕರಾದ ಎಸ್.ಟಿ. ಸುಣಗಾರ, ಪ್ರಕಾಶ ರಾಠೋಡ, ರಾಜು ಆಲಗೂರ, ವಕೀಲ ಎಂ.ಎಂ. ಸುತಾರ, ಫೆಡಿನಾ ಸಂಸ್ಥೆಯ ಮುಖ್ಯಸ್ಥ ಪ್ರಭುಗೌಡ ಪಾಟೀಲ, ಮೆಹಿಮೂದ ಖಾಜಿ ವೇದಿಕೆಯಲ್ಲಿದ್ದರು. ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು.

ಪ್ರೊ. ಮಹಾದೇವ ರೆಬಿನಾಳ, ಪ್ರೊ.ಯು.ಎನ್. ಕುಂಟೋಜಿ, ಪ್ರೊ. ಮಲ್ಲಿಕಾರ್ಜುನ ಅವಟಿ, ಪ್ರೊ.ಆರ್.ಬಿ. ಉಪಾಸೆ, ಡಾ.ಅಮೀರುದ್ದೀನ್ ಖಾಜಿ, ನಗರಸಭೆ ಸದಸ್ಯ ಮಿಲಿಂದ ಚಂಚಲಕರ, ಶೇಷರಾವ ಮಾನೆ, ವಿ.ಎಸ್. ಪಾಟೀಲ, ಪಿ.ಎಸ್. ಮುಲ್ಲಾ, ಪರ್ವೇಜ್ ಚಟ್ಟರಕಿ, ಸಮದ್ ಸುತಾರ ಇತರರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.