ADVERTISEMENT

ರೈತರೇ ನಿರ್ಮಿಸಿಕೊಂಡ ಹೊಲದ ದಾರಿ...

ಸರ್ಕಾರದ ‘ನಮ್ಮ ಹೊಲ ನಮ್ಮ ದಾರಿ’ ತಲುಪದ ಯೋಜನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:18 IST
Last Updated 16 ಡಿಸೆಂಬರ್ 2013, 5:18 IST

ತಾಳಿಕೋಟೆ: ಇಂದು ನಾಳೆ ಎನ್ನುತ್ತ ಎಂಟು–ಹತ್ತು ವರ್ಷ ಕಾಯ್ದರೂ ತಮ್ಮ ಜಮೀನುಗಳಿಗೆ ಹೋಗುವ ರಸ್ತೆಯನ್ನು ಸಂಬಂಧಿಸಿದ ಇಲಾಖೆಯಾಗಲಿ ಜನ ಪ್ರತಿನಿಧಿಗಳಾಗಲಿ ನಿರ್ಮಿಸದೇ ಹೋದಾಗ ವ್ಯವಸ್ಥೆಯ ವಿರುದ್ಧ  ರೋಸಿ ಹೋಗಿ, ರೈತರು ತಾವೇ ಸ್ವತಃ ಹಣ ಸಂಗ್ರಹಿಸಿ ರಸ್ತೆ ಅಭಿವೃದ್ಧಿಪಡಿಸಿಕೊಳ್ಳಲು  ಮುಂದಾಗುವ ಮೂಲಕ ಸರ್ಕಾರವನ್ನು ನೆಚ್ಚದೇ ನಮ್ಮ ಕೆಲಸ ನಾವೇ  ಮಾಡಿ ಕೊಳ್ಳುವುದು ವಾಸಿ ಎಂದು ಇತರರಿಗೆ  ಪಟ್ಟಣದ ರೈತರು ಮಾದರಿಯಾ ಗಿದ್ದಾರೆ.

ತಾಳಿಕೋಟೆ ಪಟ್ಟಣದಿಂದ ಜಮೀನು ಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 5 ಕಿಮೀ ಉದ್ದದ ಸಿಡಲಭಾವಿ ರಸ್ತೆಯನ್ನು ಸ್ವತಃ ರೈತರೇ ನಿರ್ಮಾಣ ಮಾಡಿದ್ದಾರೆ. ಈ ರಸ್ತೆ ಸುಧಾರಣೆಯಿಂದ ಇಂದು ಸಾವಿರಾರು ಹೆಕ್ಟೇರ್‌ ಜಮೀನುಗಳಿಗೆ ನಿರಾತಂಕವಾಗಿ ಹೋಗಿ ಬರಲು ಅನು ಕೂಲವಾಗಿದೆ.

ಇದಕ್ಕಾಗಿ ಈ ರಸ್ತೆಯನ್ನು ಬಳಸುವ ರೈತರೆಲ್ಲ ಸೇರಿ ಹಣ ಸಂಗ್ರಹಿಸಿ ಹಗಲು–ರಾತ್ರಿ ನಿಂತು ಜೆಸಿಬಿ ಯಂತ್ರದ ಜೊತೆ ತಾವೂ ನೆರವಾಗಿದ್ದಾರೆ. ಈ ರಸ್ತೆ ಸುಧಾರಣೆಗಾಗಿ ಈ ಭಾಗದ ರೈತರು ಸಂಬಂಧ ಇರಲಿ ಇಲ್ಲದಿರಲಿ ಎಲ್ಲರನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದರು.

ಆದರೆ ಎಲ್ಲರಿಂದಲೂ ಭರವಸೆಗಳೇ  ಬಂದವೆ ವಿನ: ಬವಣೆ ತೀರಲಿಲ್ಲ. ಮಳೆ ಗಾಲ ಬಂದರೆ ಸಾಕು ಕಪ್ಪು ಮಣ್ಣಿನ ಜಮೀನು ಹೊಂದಿರುವ ಇಲ್ಲಿ ನಡೆ ದಾಡುವುದೂ ದುಸ್ತರವಾಗುತ್ತಿತ್ತು. ಜೊತೆಗೆ ಎಡ–ಬಲಗಳಲ್ಲಿ ಮುಳ್ಳು–ಕಂಟಿ ಬೆಳೆದು ನಿಂತು ರಸ್ತೆ ಇಕ್ಕಟ್ಟಾ ಗುತ್ತಿತ್ತು. ಆದರೆ ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ಈ ಜನಕ್ಕೆ ಜಮೀನುಗಳಿಗೆ ಹೋಗದೇ ಪರ್ಯಾಯ ಕಾಣಲಿಲ್ಲ.

ಬಿತ್ತನೆಗೆ, ಎಡೆ ಹೊಡೆಯಲು, ಫಸಲಿನ ರಾಶಿಗೆ ಹೀಗೆ ವಿವಿಧ ಹಂತ ಗಳಲ್ಲಿ ಜಮೀನುಗಳಿಗೆ ಹೋಗಲು ಎತ್ತಿನ ಗಾಡಿಗಳು, ಯಂತ್ರಗಳನ್ನು ಹೊತ್ತ ಗಾಡಿಗಳು ಬರಲೇ ಬೇಕಿತ್ತು. ಇದಕ್ಕಾಗಿ ಇದೇ ಪಟ್ಟಣದಲ್ಲಿ  ಕೇಂದ್ರ ಕಚೇರಿ ಹೊಂದಿರುವ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದಲಾದರೂ ನೆರವಾಗ ಬಹುದು ಎಂದು ರೈತರು ಅಲ್ಲಿ ಭೇಟಿ ನೀಡಿ ಕಾಮಗಾರಿಗೆ ಆಗ್ರಹಿಸಿದ್ದರು.

ಆಗ ವಿಧಾನಸಭಾ ಚುನಾವಣೆ ಕಾಲವಾಗಿದ್ದರಿಂದ ಜನಪ್ರತಿನಿಧಿಗಳು ಇದರ ದುರಸ್ತಿಗೆ ಎಪಿಎಂಸಿಗೆ ಸೂಚನೆ ನೀಡಿದ್ದರು. ಕ್ರಿಯಾ ಯೋಜನೆಯೂ ಆಯಿತು. ಇನ್ನೇನು ರಸ್ತೆ ನಿರ್ಮಣ ಆಗಿಯೆ ಹೋಯಿತು ಎಂದು ನಂಬಿದ್ದ ರೈತರ ಕನಸು ವರ್ಷ ಕಳೆದರೂ ನನ ಸಾಗಲೇ ಇಲ್ಲ. ಅಂತಿಮವಾಗಿ ಮಾಹಿತಿ ಹಕ್ಕು ಅಸ್ತ್ರ ಬಳಸಿ ಮಾಹಿತಿ ಕೆದಕಿದಾಗ ಈ ರಸ್ತೆ ನಿರ್ಮಾಣಕ್ಕೆ ಬಳಸಬೇಕಿದ್ದ ₨ 1.5 ಲಕ್ಷ ಅನುದಾನ ಇನ್ನಾವುದೋ ಕಾಮಗಾರಿಗೆ ಬಳಸಿ ರೈತರ ಕನಸಿಗೆ ಕಿಡಿ ಇಟ್ಟಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ

ಅಂತಿಮವಾಗಿ ರೈತರೆ ಒಂದು ಸಾವಿರ ದಂತೆ ತಲೆ ಪಟ್ಟಿ ಮತ್ತು ಅಗತ್ಯ ಶ್ರಮ ದಾನಕ್ಕೆ ತೀರ್ಮಾನಿಸಿಕೊಂಡು ಲಕ್ಷಾಂತರ ವೆಚ್ಚದಲ್ಲಿ ರಸ್ತೆ ನಿರ್ಮಿಸಿ ಕೊಂಡಿದ್ದಾರೆ. ಆದರೆ ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಶಾಶ್ವತವಾಗಿ ಉತ್ತಮ ರಸ್ತೆ ನಿರ್ಮಾಣವಾಗಬೇಕು ಎನ್ನುವುದು  ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ ಕಿಸಾನ ಸಭಾದ ತಾಲ್ಲೂಕು  ಘಟಕದ ಅಧ್ಯಕ್ಷ ಪಿ.ಎಚ್.ನಾಯ್ಕೋಡಿ, ವಿಶ್ವನಾಥ ಬಿದರಕುಂದಿ ,ಕೆ.ಎಸ್.ಕೆಂಭಾವಿ, ಅಮರ ಸಿಂಗ್‌ ಹಜೇರಿ, ಇಮಾಮಹುಸೇನ ಚೋರಗಸ್ತಿ, ಬಲಭೀಮ ಗೊಲ್ಲರ, ಮೈಬೂಬಸಾಬ ಜಮಾದಾರ, ಮೈಬೂ ಬಸಾಬ ನಮಾಜಕಟ್ಟಿ, ಶಂಕರ ಕಲಾಲ, ಮೈಬೂಬ ಪಟೇಲ, ಶಿವಣ್ಣ ಸರೂರ ,ಎಸ್.ಆರ್.ಹುಬಳಿ, ಅಮೀನ ಸಾಬ ಚಾಂದಕೋಟೆ, ಬಿ.ಓ.ತಂಬಾಕೆ, ಬಸವ ರಾಜ ಅಲ್ಯಾಳ, ಚಂದಾಹುಸೇನ ಲಾಹೋರಿ ಮೊದಲಾದವರ ಬೇಡಿಕೆಯಾಗಿದೆ.

ಸಂಬಂಧಿಸಿದವರು ಈ ಬಾರಿಯಾ ದರೂ ಮುಂದಿನ ಮಳೆಗಾಲದ ಒಳಗೆ ರೈತರಿಗೆ ಉತ್ತಮ ರಸ್ತೆ ಮಾಡಿಕೊಟ್ಟರೆ ನಾಡಿನ ಜನರ ಹೊಟ್ಟೆ ತುಂಬಿಸುವ ರೈತನ ಹೊಟ್ಟೆ ತಣ್ಣಗಾಗಬಹುದು ಎನ್ನುವ  ಕವೀ ಪೌಂಡೇಶನ್‌ನ ಸಂಚಾ ಲಕ ವೀರೇಶ ಕೋರಿಯವರ ಮಾತು ಸರ್ಕಾರದ ಕಿವಿಗೆ ಮುಟ್ಟಲಿ ಎಂಬುದೆ ಎಲ್ಲ ರೈತರ ಬಯಕೆಯಾಗಿದೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.