ADVERTISEMENT

ವರವಾಗದ ಕೃಷ್ಣಾ ಕಾಲುವೆಗಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:41 IST
Last Updated 3 ಜುಲೈ 2013, 5:41 IST
ಚಡಚಣ ಸಮೀಪದ ಹಲಸಂಗಿ ಗ್ರಾಮದ ಹತ್ತಿರ ರೈತ ಅರವಿಂದ ಬೊಳಗೊಂಡೆ ಅವರ ಜಮೀನಿನ ಪಕ್ಕದಲ್ಲಿ ಹಾದು ಹೋದ ಕೃಷ್ಣಾ ಕಾಲುವೆ ಒಡೆದು ಹೋಗಿದೆ.
ಚಡಚಣ ಸಮೀಪದ ಹಲಸಂಗಿ ಗ್ರಾಮದ ಹತ್ತಿರ ರೈತ ಅರವಿಂದ ಬೊಳಗೊಂಡೆ ಅವರ ಜಮೀನಿನ ಪಕ್ಕದಲ್ಲಿ ಹಾದು ಹೋದ ಕೃಷ್ಣಾ ಕಾಲುವೆ ಒಡೆದು ಹೋಗಿದೆ.   

ಚಡಚಣ: ಇಂಡಿ ತಾಲ್ಲೂಕಿನಲ್ಲಿ ಕೆಲ ದಶಕದ ಹಿಂದೆ  ಕೃಷ್ಣಾ ಕಾಲುವೆ ನಿರ್ಮಾಣದ ಯೋಜನೆ ಆರಂಭಗೊಂಡಾಗ ರೈತರ ಮೊಗದಲ್ಲಿ ಆಶಾಭಾವನೆ ಮೂಡಿತ್ತು. ಆದರೆ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ವಿಫಲವಾಗಿದೆ.

ಕೃಷ್ಣಾ ಅಣೆಕಟ್ಟಿನಿಂದ ನಾರಾಯಣಪುರ ಡ್ಯಾಂ ಮೂಲಕ ಇಂಡಿ ತಾಲ್ಲೂಕಿನಲ್ಲಿ ಸಾತಲಾಂವ ಸಾಲುಟಗಿ, ಲಚ್ಯಾಣ, ಹಿರಸಂಗ ಚಿಕ್ಕ ಲೋಣಿ, ಹಲಸಂಗಿ ಮಣಂಕಲಗಿ, ತದ್ದೇವಾಡಿ, ಹತ್ತಳ್ಳಿ ರೇವತಗಾಂವ ಮೂಲಕ ಭೀಮಾ ನದಿ ತೀರದಲ್ಲಿರುವ ದಸೂರ ಗ್ರಾಮಕ್ಕೆ ಬಂದು ತಲುಪುವ ಈ ಕಾಲುವೆಗಳಲ್ಲಿ ನೀರು ಹರಿಯುವುದೇ ದುಸ್ತರ.

ಕಳಪೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಉದುರಿ ಬೀಳುವ ಸಿಮೆಂಟ್, ಕಾಲುವೆಗಳಲ್ಲಿನ ಬಿರುಕುಗಳು, ತುಂಬಿ ನಿಂತ ಹೂಳು, ಕಿತ್ತು ಹೋದ ಗೇಟ್‌ಗಳು ಕಾಣಿಸುತ್ತಿವೆ.

ಕಾಲುವೆಯಲ್ಲಿ ನೀರು ಸಮತಟ್ಟಾಗಿ ಹರಿಯುವ ಬದಲು, ಒಂದೇ ಬದಿಗೆ ಹರಿದು, ಹಳ್ಳ ಕೊಳ್ಳಗಳಲ್ಲಿ ನೀರು ಹರಿದು ಹೋಗಿ ಕಾಲುವೆಯ ಕೊನೆಯ ಜಮೀನಿಗೆ ಮುಟ್ಟುವುದಿಲ್ಲ. ಕೃಷ್ಣಾ ಕಾಲುವೆಯಿಂದ ಹಲಸಂಗಿಯವರೆಗೆ ಅಲ್ಪ ಸ್ವಲ್ಪ ನೀರು ಹರಿದು ಹಳ್ಳಕ್ಕೆ ಕೂಡುತ್ತಿದೆ.

ಈ ಗ್ರಾಮದಿಂದ ಮುಂದಿನ ಗ್ರಾಮಗಳಾದ ಏಳಗಿ, ಮಣಂಕಲಗಿ ಮೂಲಕ ದಸೂರ ವರೆಗೆ ನೀರು ಹರಿಯುವುದೇ ಇಲ್ಲ. ಪ್ರತಿ ವರ್ಷ ಲಕ್ಷಾಂತರ ಹಣ ವ್ಯಯಿಸಿ ಕಾಲುವೆಯಲ್ಲಿನ ಹೂಳು ತೆಗೆದರೂ ರೈತರ ಹೊಲಗಾಲುವೆಗಳಿಗೆ ನೀರು ಹರಿಯುವದು ಮಾತ್ರ ಮರೀಚಿಕೆಯಾಗಿದೆ.

ಕೋಟ್ಯಂತರ ಹಣ ವ್ಯಯಿಸಿ, ರೈತರ ಜಮೀನುಗಳಿಗೆ ನೀರು ಪೂರೈಸುವ ಸರ್ಕಾರದ ಯೋಜನೆ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆಯಿಂದಾಗಿ ಕೃಷ್ಣಾ ನದಿಯಿಂದ ನೀರು ಹರಿಸುವ ಈ ಯೋಜನೆ ರೈತರಿಗೆ ವರವಾಗದೆ ಮರೀಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.