ADVERTISEMENT

ಸುಧಾರಣೆ ಕಾಣದ ರಸ್ತೆ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 5:00 IST
Last Updated 21 ಮಾರ್ಚ್ 2012, 5:00 IST
ಸುಧಾರಣೆ ಕಾಣದ ರಸ್ತೆ: ಜನರ ಪರದಾಟ
ಸುಧಾರಣೆ ಕಾಣದ ರಸ್ತೆ: ಜನರ ಪರದಾಟ   

ತಾಳಿಕೋಟೆ: ತಾಳಿಕೋಟೆಯಿಂದ ಹುಣಸಿಗೆಯತ್ತ ಹೋಗುವ ಮಾರ್ಗ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಈಗ ಅಲ್ಲಿ ಪಯಣಿಸುವುದಕ್ಕೆ ಇಪ್ಪತ್ತು ಕಿ.ಮೀ. ದೂರದ ಪಯಣಕ್ಕೆ ಈಗ ಒಂದು ಗಂಟೆ ಬೇಕು!
ಆಳದ ಗುಂಡಿಗಳು, ಕಿತ್ತು ಹೋದ ರಸ್ತೆ ಸಂಚರಿಸುವ ಎಲ್ಲ ವಾಹನಗಳು ಪದೇ ಪದೇ ಗೇರ್ ಬದಲಿಸಬೇಕು.

ಹೇಗೆ ಮಾಡಿದರೂ ಒಂದು ಗುಂಡಿ ಗಾದರೂ ಟೈರ್ ಇಳಿಯಲೇಬೇಕು. ಹಿಂದೆ ಕುಳಿತ ಪ್ರಯಾಣಿಕರು ಏಯ್... ಎಂದು ಚಾಲಕನಿಗೆ ಕೂಗು ಹಾಕಬೇಕು. ಹೀಗಾದಾಗ ಯಾವ ವಾಹನ ತಾನೇ ಇಂಧನ ಕ್ಷಮತೆ ತೋರಿಯಾವು ತಮ್ಮ ಗಟ್ಟಿತನ ಉಳಿಸಿಕೊಂಡಾವು. ಉತ್ತಮ ವಾಹನಗಳೂ ಜಖಂ ಆಗುವ ಸ್ಥಿತಿ ಇಲ್ಲಿನ ರಸ್ತೆಯದು.

ರಾಜ್ಯ ಹೆದ್ದಾರಿಯಾಗಿರುವುದರಿಂದ ವಿಜಾಪುರದಿಂದ ಹೂವಿನ ಹಿಪ್ಪರಗಿ, ತಾಳಿಕೋಟೆ ಹುಣಸಿಗೆ ಮಾರ್ಗದಿಂದ ಸುರಪುರ, ಯಾದಗಿರಿ, ಶಹಾಪುರ, ಗುಲ್ಬರ್ಗ, ಲಿಂಗಸೂಗುರು, ರಾಯ ಚೂರು, ಕೊಪ್ಪಳ, ಹೈದರಾಬಾದ್, ತಿರುಪತಿ,  ಶ್ರಿಶೈಲದಂಥ ದೂರದ ಪ್ರಮುಖ ಪಟ್ಟಣಗಳಿಗೆ ಹೋಗಲು ಇದೇ ಮುಖ್ಯ ಹೆದ್ದಾರಿ.

ನಿತ್ಯ ಇಲ್ಲಿ ನೂರಕ್ಕೂ ಅಧಿಕ ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸುತ್ತವೆ. ಇವಲ್ಲದೆ  ಗ್ರಾಮಾಂತರ ಗಳಿಗೆ ತೆರಳುವ ಬಸ್‌ಗಳು, ಟಂಟಂಗಳು, ಜೀಪ್‌ಗಳು, ಟ್ರ್ಯಾಕ್ಟರ್‌ಗಳು ನಿತ್ಯ ಇಲ್ಲಿ ಚಲಿಸುತ್ತವೆ ಎಲ್ಲವುಗಳದು ಒಂದೇ ಗೋಳು, ಈ ರಸ್ತೆ ದುರಸ್ತಿ ಯಾವಾಗ ಎಂಬುದು. ಹೀಗಾಗಿ ಶಾಪ ಹಾಕದೇ ಪ್ರಯಾಣಿಸುವ ಯಾವ ವಾಹನಗಳು ಇಲ್ಲಿಲ್ಲ. ಕೆಲವೆಡೆ ರಸ್ತೆ ಆಳ ಎರಡು ಅಡಿ ದಾಟುತ್ತದೆ.

ಕಿತ್ತು ಹೋದ ಕಲ್ಲುಗಳು ಟೈರ್ ವೇಗಕ್ಕೆ ಸಿಕ್ಕು ಪಕ್ಕದಲ್ಲಿ ಚಲಿಸುವವರಿಗೆ ಬಡಿಯುತ್ತಿವೆ. ಮೇಲೇಳುವ ಧೂಳು ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಈ ರಸ್ತೆಗೆ ಮುಕ್ತಿ ಇಲ್ಲವೆ ಎಂಬುದೆ ಸಾರ್ವಜನಿಕರ ಪ್ರಶ್ನೆ. ರಸ್ತೆ ದುರಸ್ತಿ
ನೆಪದಲ್ಲಿ ಹಿಂದೆ ಹಾಕಿದ ಮಣ್ಣನ್ನು ಗಟ್ಟಿಗೊಳಿಸದೆ ಇರುವುದರಿಂದ ಹಾಕಿದ ದಿನವೇ ತೆಗ್ಗುಗಳು ಮೊದಲಿನ ಸ್ಥಿತಿಗೆ ಮರಳಿವೆ.

ಮನಗೂಳಿಯಿಂದ ದೇವಪುರ ಕ್ರಾಸ್‌ವರೆಗಿನ ರಾಜ್ಯ ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳ ಲಾಗಿದೆ ಎಂಬ ಮಾಹಿತಿ ಬಂದಾಗ ಈ ಭಾಗದ ಜನತೆ ಕುಣಿದಾಡಿದ್ದರು. ಹೂವಿನ ಹಿಪ್ಪರಗಿಯಿಂದ ತಾಳಿಕೋಟೆ ಯವರೆಗೆ ಅಲ್ಲಲ್ಲಿ ತೆಗ್ಗುಗಳಿಗೆ ತೇಪೆ ಹಾಕುವ ಕೆಲಸ ಮಾಡಲಾಯಿತಾದರೂ ರಸ್ತೆ ಹಾಗೆಯೇ ಉಳಿದಿದೆ.

ಆದರೆ ರಸ್ತೆ ನಿರ್ಮಾಣ ಕಾರ್ಯ ನಿಂತಿದ್ದು ಏಕೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಈ ರಸ್ತೆ ದುರಸ್ತಿ ಯಾವಾಗ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.