ADVERTISEMENT

ವಿಜಯಪುರ | ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹100 ಕೋಟಿ: ಸಚಿವ ಎಂ.ಬಿ.ಪಾಟೀಲ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:33 IST
Last Updated 13 ಜುಲೈ 2024, 15:33 IST
ಬಬಲೇಶ್ವರ ತಾಲ್ಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ಶ್ರೀ ಲಾಲಸಾಬ ದೇವರ ಕಟ್ಟಡದ ಉದ್ಘಾಟನೆ ಸಮಾರಂಭ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಚವಡಿ ಕಟ್ಟಡ ಭೂಮಿಪೂಜೆ ನೆರವೇರಿಸಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು
ಬಬಲೇಶ್ವರ ತಾಲ್ಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ಶ್ರೀ ಲಾಲಸಾಬ ದೇವರ ಕಟ್ಟಡದ ಉದ್ಘಾಟನೆ ಸಮಾರಂಭ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಚವಡಿ ಕಟ್ಟಡ ಭೂಮಿಪೂಜೆ ನೆರವೇರಿಸಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು   

ವಿಜಯಪುರ: ಬೆಂಗಳೂರಿನಲ್ಲಿರುವ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಸುಮಾರು ₹100 ಕೋಟಿ ಸಿಎಸ್ಆರ್ ಅನುದಾನವನ್ನು ಬಳಸಿ ಶಾಲಾ ಕೊಠಡಿಗಳು, ಶೌಚಾಲಯ, ಕುಡಿಯಲು ನೀರಿನ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್, ವಾಚನಾಲಯ, ಕ್ರೀಡಾ ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಬಳಸಲಾಗುವುದು. ಇದರಿಂದ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ಕಂಬಾಗಿಯಲ್ಲಿ ಪಿ. ಎಂ. ಶ್ರೀ ಸರ್ಕಾರಿ ಪ್ರಾಥಮಿಕ ಶಾಲೆ ನೂತನ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಅವರು  ಮಾತನಾಡಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ನಾವು 3000 ಗುಡಿ, ಗುಂಡಾರಗಳಿಗೆ ಅನುದಾನ ನೀಡಿದ್ದೇನೆ. ಇದೇ ಹಣವನ್ನು ಬಳಸಿ ಇಡೀ ಮತಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಬಹುದಾಗಿತ್ತು. ಶಾಲೆಯೇ ದೇವಸ್ಥಾನ, ಮಕ್ಕಳೇ ದೇವರು ಎಂದು ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಆಗುವುದಿಲ್ಲ ಎಂದರು.

ADVERTISEMENT

ಪಾಠ ಮಾಡುವ ಶಿಕ್ಷಕರೂ ಕೂಡ ಕಾಲಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡಬೇಕು. ಅಂತರ್ಜಾಲದ ಸದುಪಯೋಗ ಪಡಿಸಿಕೊಂಡು ಅಪಡೇಟ್ ಆಗಬೇಕು. ಈಗ ಕೃತಕ ಬುದ್ದಿಮತ್ತೆ ಕಾಲ ಪ್ರಾರಂಭವಾಗಿರುವುದರಿಂದ ಶಿಕ್ಷಕರು ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ನಿಮ್ಮ ಮಕ್ಕಳಿಗೂ ಒಳ್ಳೆಯದಾಗಲಿದೆ. ಗ್ರಾಮದ ಹಿರಿಯರು, ಯುವಕರು ರಾಜಕಾರಣ ಮತ್ತು ಜಾತಿಯನ್ನು ಕಂಪೌಂಡ್ ಹೊರಗಿಡಬೇಕು. ರಾಜಕೀಯ ಪ್ರತಿಷ್ಠೆ ಬದಿಗಿಡಬೇಕು. ಅರಮನೆಯಲ್ಲಿರುವ ಶಾಲೆಗಿಂತ, ಗುಡಿಸಲಿನಲ್ಲಿ ಉತ್ತಮ ಶಿಕ್ಷಕರಿಂದ ಕೂಡಿರುವ ಬೋಧನೆ ಅಗತ್ಯವಾಗಿದೆ ಎಂದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಸಚಿವರು ತಮ್ಮ ಶಾಸಕರ ಅನುದಾನವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ನೀಡುತ್ತಿರುವುದು ಮಕ್ಕಳ ಪಾಲಿಗೆ ವರದಾನವಾಗಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಎಸ್. ಡಿ. ಎಂ. ಸಿ. ಅಧ್ಯಕ್ಷ ಹಸನಸಾಬ ಹಳಬರ, ಗ್ರಾ. ಪಂ. ಅಧ್ಯಕ್ಷೆ ಕವಿತಾ ಮಲ್ಲಯ್ಯ ಮಠಪತಿ, ಮುಖಂಡರಾದ ಈರಗೊಂಡ ಬಿರಾದಾರ, ಅಪ್ಪುಗೌಡ ಪಾಟೀಲ ಶೇಗುಣಸಿ, ಕೆ. ಎಚ್. ಮುಂಬಾರೆಡ್ಡಿ, ಮುತ್ತಪ್ಪ ಶಿವಣ್ಣವರ, ಪ್ರಕಾಶ ಸೊನ್ನದ, ಮಹಾದೇವ ಮದರಖಂಡಿ, ರಮೇಶ ಬಡ್ರಿ, ಶೇಖಪ್ಪ ಚಿಕ್ಕಗಲಗಲಿ, ರಂಗನಗೌಡ ಬಿರಾದಾರ, ಮಲ್ಲು ದಳವಾಯಿ, ಡಿಡಿಪಿಐ ಎನ್. ಎಚ್. ನಾಗೂರ, ವಿಜಯಪುರ ಗ್ರಾಮೀಣ ಬಿಇಓ ಪ್ರಮೋದಿನಿ ಬಳೂಲಮಟ್ಟಿ, ಮಲ್ಲಿಕಾರ್ಜುನ ಅಂಗಡಿ, ಮಾರುತಿ ಕೊಪ್ಪದ, ಉಮೇಶ ಮಲ್ಲಣ್ಣವರ ಇದ್ದರು.

ಇನ್ನು ಮುಂದೆ ಕಾರ್ಯಕ್ರಮಗಳಲ್ಲಿ ಹಾರ ಶಾಲು ಸನ್ಮಾನ ಬೇಡ. ಇದಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ಸಹಾಯ ಮಾಡಿ. ಸನ್ಮಾನದಿಂದ ಸಮಯ ವ್ಯಯವಾಗುತ್ತದೆ 

-ಎಂ.ಬಿ.ಪಾಟೀಲಜಿಲ್ಲಾ ಉಸ್ತುವಾರಿ ಸಚಿವ 

‘ಬೋಳಚಿಕ್ಕಲಕಿ ಭಾವೈಕ್ಯಕ್ಕೆ ಸಾಕ್ಷಿ’ ಬೋಳಚಿಕ್ಕಲಕಿ ಗ್ರಾಮದಲ್ಲಿ ಶ್ರೀ ಲಾಲಸಾಬ ದೇವರ ಕಟ್ಟಡದ ಉದ್ಘಾಟನೆ ಸಮಾರಂಭ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಚವಡಿ ಕಟ್ಟಡ ಭೂಮಿಪೂಜೆ ನೆರವೇರಿಸಿದರು. ಇಲ್ಲಿರುವ ಲಾಲಸಾಬ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳು ಭಾವೈಕ್ಯಕ್ಕೆ ಸಾಕ್ಷಿಯಾಗಿವೆ. ನಮ್ಮ ಧರ್ಮವನ್ನು ಪ್ರೀತಿಸಬೇಕು. ಬೇರೆಯವರ ಧರ್ಮವನ್ನು ಗೌರವಿಸಬೇಕು. ಇದು ಭಾರತೀಯ ಸಂಸ್ಕೃತಿ. ಬೋಳಚಿಕ್ಕಲಕಿಯಲ್ಲಿ ಈ ಭಾವೈಕ್ಯ ಇದೆ ಎಂದು ಹೇಳಿದರು. ಗ್ರಾಮದ ಮುಖಂಡ ಸಿದ್ದಪ್ಪ ಮ. ಸಜ್ಜನ ಮಾತನಾಡಿ ನಮ್ಮ ಭಾಗದಲ್ಲಿ ನೀರಾವರಿ ಯೋಜನೆಗಳ ಮೂಲಕ ನಮಗೆಲ್ಲ ನೀರು ನೀಡಿದ ಎಂಬಿಪಿ ದೇವರ ಸಮಾನರಾಗಿದ್ದಾರೆ ಎಂದು ಹೇಳಿದರು. ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ ಮುಖಂಡರಾದ ಸದಾಶಿವ ಸಜ್ಜನ ಶಿವಾಜಿ ಮಾದರ ಮುತ್ತಪ್ಪ ವಾಣಿ ಸಿದ್ದು ತೋಟದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.