ADVERTISEMENT

ಬಸವನಬಾಗೇವಾಡಿ | ಏಂಟು ತಿಂಗಳಿಂದ ಕೆಟ್ಟು ನಿಂತ 108 ಅಂಬುಲೆನ್ಸ್

ತಪ್ಪದ ಗಾಯಾಳುಗಳು, ರೋಗಿಗಳ ನರಳಾಟ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:34 IST
Last Updated 25 ಜುಲೈ 2025, 5:34 IST
ಬಸವನಬಾಗೇವಾಡಿ ತಾಲ್ಲೂಕಾಸ್ಪತ್ರೆ ಆವರಣದಲ್ಲಿ ಕೆಟ್ಟು ನಿಂತಿರುವ 108 ಅಂಬುಲೆನ್ಸ್ ವಾಹನ
ಬಸವನಬಾಗೇವಾಡಿ ತಾಲ್ಲೂಕಾಸ್ಪತ್ರೆ ಆವರಣದಲ್ಲಿ ಕೆಟ್ಟು ನಿಂತಿರುವ 108 ಅಂಬುಲೆನ್ಸ್ ವಾಹನ   

ಬಸವನಬಾಗೇವಾಡಿ: ಪಟ್ಟಣ ಹಾಗೂ ಸುತ್ತಮುತ್ತ ರಸ್ತೆ ಅಪಘಾತಗಳು, ದುರ್ಘಟನೆಗಳು, ತುರ್ತು ಸಂಧರ್ಭಗಳಲ್ಲಿ ತುರ್ತು ಆರೋಗ್ಯ ಸೇವೆಗೆ ಧಾವಿಸಬೇಕಾದ 108 ಅಂಬುಲೆನ್ಸ್ ವಾಹನ ಕಳೆದ ಏಳೆಂಟು ತಿಂಗಳಿಂದ ಕೆಟ್ಟು ನಿಂತಿದ್ದು, ಬಸವನಬಾಗೇವಾಡಿ ಪಟ್ಟಣದ ಪಾಲಿಗೆ ತುರ್ತು ಆರೋಗ್ಯ ಸೇವೆ ಅಲಭ್ಯವಾದಂತಾಗಿದೆ.

ಬಸವನಬಾಗೇವಾಡಿ ತಾಲ್ಲೂಕು ಆರೋಗ್ಯಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸುವ  ರಸ್ತೆ ಅಪಘಾತಗಳು, ದುರ್ಘಟನೆ ಹಾಗೂ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು, ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಸಾಗಿಸಲು 108 ಅಂಬುಲೆನ್ಸ್ ವಾಹನ ನಿಯೋಜಿಸಲಾಗಿದೆ. ಅಪಘಾತ ಸಂದರ್ಭದಲ್ಲಿ ಗಾಯಾಳುವಿಗೆ ಪ್ರತಿಕ್ಷಣವೂ ಅತ್ಯಮೂಲ್ಯ. ಆದರೆ, ಬಸವನಬಾಗೇವಾಡಿ ಪಟ್ಟಣದಲ್ಲಿ ನಿಯೋಜಿಸಲಾದ 108 ಅಂಬುಲೆನ್ಸ್ ವಾಹನ ಕಳೆದ ಏಳೆಂಟು ತಿಂಗಳಿಂದ ಕೆಟ್ಟುನಿಂತು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಧೂಳು ಹಿಡಿದಿದೆ. ಇದರಿಂದ ರೋಗಿಗಳು, ರಸ್ತೆ ಅಪಘಾತಗಳಲ್ಲಿನ ಗಾಯಾಳುಗಳಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ, ಸಮೀಪದ ಆಸ್ಪತ್ರೆಗೂ ತೆರಳಿ‌ ತುರ್ತು ಚಿಕಿತ್ಸೆ ಪಡೆಯಲಾಗದೇ ನರಳಾಡುವ ದುಸ್ಥಿತಿ ಬಂದೊದಗಿದೆ.

ಪಟ್ಟಣ ಸಮೀಪದ ಜೈನಾಪೂರ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ಕಾಲಿಗೆ ತೀವ್ರ ಪೆಟ್ಟು ಬಿದ್ದು ಪಾದದ ಮೂಳೆ ಹೊರಬಂದಿತ್ತು. ಗಾಯಾಳು ನರಳಾಟ ನೋಡಲಾಗದೇ ಸ್ಥಳೀಯರು 108 ಅಂಬುಲೆನ್ಸ್ ಸೇವೆಗೆ ಎಷ್ಟೇ ಕರೆ ಮಾಡಿದರೂ ವಾಹನ ಬರಲಿಲ್ಲ, ಕೊನೆಗೆ ಪೊಲೀಸರು, ಸ್ಥಳೀಯರ ಸಹಾಯದಿಂದ ಆಟೋದಲ್ಲಿ ಗಾಯಾಳುವನ್ನು ತಾಲ್ಲೂಕು ಆಸ್ಪತ್ರೆಗೆ ರವಾನಿಸಿದ ಬಳಿಕ ತುರ್ತು ಚಿಕಿತ್ಸೆ ನೀಡಲಾಯಿತು. ಸಮಯಕ್ಕೆ ಸರಿಯಾಗಿ 108 ಅಂಬುಲೆನ್ಸ್ ಸೇವೆ ಲಭಿಸದೇ ಕಳೆದ ಏಳೆಂಟು ತಿಂಗಳಿಂದ ಇಂತಹ ಸಾಕಷ್ಟು ಗಾಯಾಳುಗಳು ನರಳಾಡಿದ್ದಾರೆ.

ADVERTISEMENT

‘ಬಸವನಬಾಗೇವಾಡಿ ದೊಡ್ಡ ತಾಲ್ಲೂಕು ಕೇಂದ್ರ. ಇಲ್ಲಿ ತುರ್ತು ಆರೋಗ್ಯ ಸೇವೆಗಾಗಿ ಕನಿಷ್ಠ ಎರಡು ಅಂಬುಲೆನ್ಸ್ ವಾಹನಗಳನ್ನು ನಿಯೋಜಿಸಬೇಕು. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇರುವ ಏಕೈಕ 108 ಅಂಬುಲೆನ್ಸ್ ವಾಹನ ಏಳೆಂಟು ತಿಂಗಳಿಂದ ಕೆಟ್ಟು ನಿಂತು ರೋಗಿಗಳು, ಗಾಯಾಳುಗಳಿಗೆ ಸಮಯಕ್ಕೆ‌ ಸರಿಯಾಗಿ ತುರ್ತು ಆರೋಗ್ಯ ಸೇವೆ ಲಭಿಸದೇ ನರಳಾಡುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೆಟ್ಟು ನಿಂತಿರುವ 108 ಅಂಬುಲೆನ್ಸ್ ವಾಹನ ಬದಲಿಸಿ, ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ವಿವೇಕ ಬ್ರಿಗೇಡ್ ನ ಕಾರ್ಯಕರ್ತ ವಿನೂತ್ ಕಲ್ಲೂರ ಎಚ್ಚರಿಸಿದ್ದಾರೆ.

ಬಸವನಬಾಗೇವಾಡಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ.
ವಿನೂತ್ ಕಲ್ಲೂರ ವಿವೇಕ ಬ್ರಿಗೇಡ್ ಕಾರ್ಯಕರ್ತ
 ಬಸವನಬಾಗೇವಾಡಿ ಪಟ್ಟಣದಲ್ಲಿ ಸದ್ಯ ಕೆಟ್ಟು ನಿಂತಿರುವ 108 ಅಂಬುಲೆನ್ಸ್ ವಾಹನ ನಿರುಪಯುಕ್ತವಾಗಿದೆ. ಆಸ್ಪತ್ರೆಗೆ ನಾಳೆಯೇ ಹೊಸ  ಅಂಬುಲೆನ್ಸ್ ವಾಹನ ಕಳುಹಿಸಿ ತುರ್ತು ಆರೋಗ್ಯ ಸೇವೆಗೆ ನಿಯೋಜಿಸಲಾಗುವುದು
ಡಾ.ಸಂಪತ್ ಗುಣಾರಿ ಜಿಲ್ಲಾ ಆರೋಗ್ಯಾಧಿಕಾರಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.