ADVERTISEMENT

ಕಬ್ಬು ಕಟಾವು ಯಂತ್ರಕ್ಕೆ ₹40 ಲಕ್ಷ ಸಹಾಯಧನ: ಶಾಸಕ ಅಶೋಕ ಮನಗೂಳಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 15:28 IST
Last Updated 7 ಜನವರಿ 2025, 15:28 IST
<div class="paragraphs"><p>ಸಿಂದಗಿ ಪಟ್ಟಣದ ಕೃಷಿ ಇಲಾಖೆಯ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಶಾಸಕ ಅಶೋಕ ಮನಗೂಳಿ ಕಬ್ಬು ಕಟಾವು ಯಂತ್ರ ವಿತರಣಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. </p></div>

ಸಿಂದಗಿ ಪಟ್ಟಣದ ಕೃಷಿ ಇಲಾಖೆಯ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಶಾಸಕ ಅಶೋಕ ಮನಗೂಳಿ ಕಬ್ಬು ಕಟಾವು ಯಂತ್ರ ವಿತರಣಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು.

   

ಸಿಂದಗಿ: ರಾಜ್ಯ ಸರ್ಕಾರದ 2024-25ನೇ ಸಾಲಿನ ‘ಹೈಟೆಕ್ ಹಾರ್ವೆಸ್ಟರ್ ಯೋಜನೆ’ಯಡಿ ₹ 96 ಲಕ್ಷ ಮೌಲ್ಯದ ಕಬ್ಬು ಕಟಾವು ಯಂತ್ರವನ್ನು ಸಾಮಾನ್ಯ ವರ್ಗದ ರೈತರಿಗೆ ₹ 40 ಲಕ್ಷ ರೂಪಾಯಿ ಸಹಾಯಧನ, ಪರಿಶಿಷ್ಟ ಜಾತಿ ರೈತರಿಗೆ ₹ 50 ಲಕ್ಷ ಸಹಾಯಧಾನದಲ್ಲಿ ನೀಡಲಾಗುವುದು. ರೈತರಿಗೆ ಎಸ್‌ಬಿಐನಿಂದ ಸಾಲದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ರೈತರು ಸದುಪಯೋಗ ಪಡೆಯಬೇಕು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.

ಇಲ್ಲಿಯ ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ಕಬ್ಬು ಕಟಾವು ಯಂತ್ರದ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘2013-2018 ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗಾಗಿ ಅತ್ಯಂತ ಉಪಯುಕ್ತ ಕಬ್ಬು ಕಟಾವು ಯಂತ್ರ ಯೋಜನೆಯನ್ನು ಲೋಕಾರ್ಪಣೆ ಮಾಡಿತ್ತು. ನಂತರ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಆರಂಭಿಸಿದೆ. ಸಿಂದಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಸಕ್ಕರೆ ಕಾರ್ಖಾನೆಗಳಿವೆ. 14 ಲಕ್ಷ ಹೆಕ್ಟೆರ್‌ಗಳಷ್ಟು ಕಬ್ಬು ಬೆಳೆಯಲಾಗುತ್ತದೆ. ಕಬ್ಬು ಬೆಳೆಗಾರರು ಕಬ್ಬು ಕಟಾವು ವಿಷಯವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರನ್ನು ಕರೆ ತರಬೇಕಾಗಿತ್ತು. ಈ ಯಂತ್ರದಿಂದ ಕಬ್ಬು ಬೆಳೆಗಾರ ರೈತರಿಗೆ ತುಂಬಾ ಸಹಕಾರಿಯಾಗುತ್ತದೆ. ಆರ್ಥಿಕ ನಷ್ಟ ಕೂಡ ಇಲ್ಲವಾಗುತ್ತದೆ’ ಎಂದು ಅವರು ವಿವರಿಸಿದರು.

ಕೃಷಿ ಸಹಾಯಕ ನಿರ್ದೇಶಕ ಎಚ್.ವೈ. ಸಿಂಗೆಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಬ್ಬು ಬೆಳೆಗಾರರಾದ ಆಹೇರಿ ಗ್ರಾಮದ ಮಹಿಬೂಬಸಾಬ ದಾವಲಸಾಬ ರಂಜಣಗಿ ಹಾಗೂ ಚಟ್ಟರಕಿ ಗ್ರಾಮದ ಹಣಮಂತಪ್ಪ ಅಮರಪ್ಪಗೋಳ ಅವರಿಗೆ ಕಬ್ಬು ಕಟಾವು ಯಂತ್ರವನ್ನು ಶಾಸಕರು ಹಸ್ತಾಂತರಿಸಿದರು.

ಕೃಷಿ ಸಮಾಜ ತಾಲ್ಲೂಕು ಸಮಿತಿ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಉಪಾಧ್ಯಕ್ಷ ಬಸಯ್ಯ ಹಿರೇಮಠ ಬಂದಾಳ, ಆಹೇರಿ ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ, ವೈ.ಸಿ.ಮಯೂರ, ಗಂಗಾಧರ ಚಿಂಚೋಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.