ಆಲಮಟ್ಟಿ: ಆಲಮಟ್ಟಿ ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಈ ವರ್ಷ (2019–20) 447 ದಶಲಕ್ಷ ಯುನಿಟ್ ಉತ್ಪಾದನೆಯ ಗುರಿ ನೀಡಲಾಗಿದೆ.
2018–19 ನೇ ಸಾಲಿನಲ್ಲಿ 408 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿರುವ ಈ ಘಟಕ ಈ ವರ್ಷ ನೀಡಿರುವ ಗುರಿ ಸಾಧಿಸುವ ಆಶಾಭಾವನೆ ಹೊಂದಿದೆ.
ಆಲಮಟ್ಟಿ ಜಲಾಶಯದಿಂದ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಕೃಷ್ಣಾ ನದಿಗೆ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ನೀರು ಹರಿಸುವ ನಿರೀಕ್ಷೆಯಿದ್ದು, ಕೇಂದ್ರದ ಎಲ್ಲಾ ಆರು ಘಟಕಗಳು ಪೂರ್ಣವಾಗಿ ಕಾರ್ಯಾರಂಭಿಸಿ ಗರಿಷ್ಠ ಉತ್ಪಾದನೆಗೆ ಸಜ್ಜಾಗಿದೆ.
ಆಲಮಟ್ಟಿ ಜಲಾಶಯದ ನೀರು ಬಿಡುಗಡೆ ಆಧಾರದ ಮೇಲೆ ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಕಳೆದ ಏಪ್ರಿಲ್‌ನಿಂದ ನೀರು ಬಿಡದ ಕಾರಣ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಆದರೆ, ಇದೇ ಜುಲೈ 9ರಂದು ಒಂದು ದಿನ ನೀರು ಬಿಟ್ಟ ಕಾರಣ ಆ ದಿನ ವಿದ್ಯುತ್ ಉತ್ಪಾದಿಸಿ ಸದ್ಯ ಘಟಕ ಸ್ಥಗಿತಗೊಂಡಿದೆ.
ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು 15 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಒಂದು, 55 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ 5 ಸೇರಿ ಒಟ್ಟು 290 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ 6 ಘಟಕಗಳಿವೆ. ಎಲ್ಲಾ ಘಟಕಗಳು ಗರಿಷ್ಠ ವಿದ್ಯುತ್ ಉತ್ಪಾದಿಸಲು ಸುಮಾರು 45 ಸಾವಿರ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಬೇಕು. ನಿತ್ಯವೂ ಎಲ್ಲಾ ಘಟಕಗಳು ಕಾರ್ಯಾರಂಭ ಮಾಡಿದರೆ 6 ದಶಲಕ್ಷ ಯುನಿಟ್‌ವರೆಗೆ ವಿದ್ಯುತ್ ಉತ್ಪಾದನೆ ಆಗುತ್ತದೆ. 2007ರ ಸೆಪ್ಟೆಂಬರ್ 6ರಂದು 7.39 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದ್ದು, ಈ ಘಟಕದ ಅತ್ಯಂತ ಗರಿಷ್ಠ ವಿದ್ಯುತ್ ಉತ್ಪಾದನೆಯಾಗಿದೆ.
‘ವಿದ್ಯುತ್ ಉತ್ಪಾದನೆ ಬಂದಾಗಿದ್ದ ವೇಳೆಯಲ್ಲಿ ವಾರ್ಷಿಕ ದುರಸ್ತಿ ನಿರ್ವಹಣೆ ಕಾರ್ಯ ಪೂರ್ಣಗೊಳಿಸಲಾಗಿದೆ. ಈಗಾಗಲೇ ಎಲ್ಲಾ ಆರು ಘಟಕಗಳ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ಜಲಾಶಯದಿಂದ ನೀರು ಪಡೆಯಿರಿ ಎಂದು ಕೆಬಿಜೆಎನ್‌ಎಲ್‌ನಿಂದ ಸೂಚನೆ ಬಂದ ತಕ್ಷಣವೇ ಒಂದು ಗಂಟೆಯಲ್ಲಿಯೇ ನೀರನ್ನು ಪಡೆದು ವಿದ್ಯುತ್ ಉತ್ಪಾದಿಸಲಾಗುವುದು’ ಎಂದು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಸೂಪರಿಂಟೆಂಡಿಂಗ್ ಎಂಜಿನಿಯರ್ ಪ್ರಭು ಕರಿಯಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.