ADVERTISEMENT

‘ಕ್ರೀಡೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಿ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 5:51 IST
Last Updated 10 ಜನವರಿ 2018, 5:51 IST

ವಿಜಯಪುರ: ‘ಕ್ರೀಡಾ ಕ್ಷೇತ್ರದ ಬಲವರ್ಧನೆಗಾಗಿ, ಆಯಾ ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಕಾಯ್ದಿರಿಸಬೇಕಿರುವುದು ಅತ್ಯಂತ ಅವಶ್ಯವಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ 63ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದ ಜನಸಂಖ್ಯೆ 125 ಕೋಟಿ ದಾಟಿದರೂ, ಕ್ರೀಡಾಕ್ಷೇತ್ರದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕ್ರೀಡಾಪಟುಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಿರುವುದು ಅತ್ಯಂತ ಅವಶ್ಯವಾಗಿದೆ. ಆಯಾ ರಾಜ್ಯ ಸರ್ಕಾರಗಳು ಸಹ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಹೆಚ್ಚಿನ ನೆರವು ನೀಡುವ ಮೂಲಕ ಬಲವರ್ಧನೆಗೆ ಮುಂದಾಗಬೇಕಿದೆ’ ಎಂದರು.

ADVERTISEMENT

‘ವಿಜಯಪುರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಜಲಸಂಪನ್ಮೂಲ ಇಲಾಖೆ ವತಿಯಿಂದಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಕಾರಣಕ್ಕಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ಮಿನಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿದಂತಹ ವಿವಿಧ ಕಾಮಗಾರಿಗಳಿಗಾಗಿ ₹ 10 ಕೋಟಿ ಅನುದಾನ ಒದಗಿಸುವುದಾಗಿ’ ಘೋಷಿಸಿದರು.

ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಎಸ್‌.ಬಾಗವಾನ, ಜಿ.ಪಂ. ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್ ಸಂಗೀತಾ ಪೋಳ, ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಗುರಿಕಾರ ಉಪಸ್ಥಿತರಿದ್ದರು.

ವರ್ಣರಂಜಿತ ಚಾಲನೆ: 63ನೇ ರಾಷ್ಟ್ರಮಟ್ಟದ 14 ವರ್ಷದೊಳಗಿನ ಶಾಲಾ ಬಾಲಕ–ಬಾಲಕಿಯರ ವಾಲಿಬಾಲ್ ಪಂದ್ಯಾವಳಿಗೆ ವರ್ಣರಂಜಿತ ಚಾಲನೆ ದೊರಕಿತು. ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಓಡಿಶಾ, ತೆಲಂಗಾಣ, ಗುಜರಾತ್, ತಮಿಳುನಾಡು, ಜಾರ್ಖಂಡ್‌ ಸೇರಿದಂತೆ ಹಲ ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳು ಕ್ರೀಡಾ ಜಾಗೃತಿ ಜಾಥಾ ನಡೆಸಿದರು. ವಿದ್ಯಾರ್ಥಿನಿಯರು ಬಂಜಾರಾ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.