ADVERTISEMENT

ಕೇಂದ್ರ ಬಜೆಟ್‌: ವಿಜಯಪುರ ಜಿಲ್ಲೆಯಲ್ಲಿ ವ್ಯತಿರಿಕ್ತ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:41 IST
Last Updated 2 ಫೆಬ್ರುವರಿ 2026, 2:41 IST
   
ವಿಜಯಪುರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಜಿಲ್ಲೆಯಲ್ಲಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗಿದೆ. ಆಯ್ದ ಪ್ರಮುಖ ಅಭಿಪ್ರಾಯಗಳು ಇಂತಿವೆ.

ಜವಳಿ, ಕೃಷಿ ಕ್ಷೇತ್ರದ ನಿರೀಕ್ಷೆ ಹುಸಿ 

ದೇಶದ ಜವಳಿ ಉದ್ಯಮ ಪುನಶ್ಚೇತನ ಹಾಗೂ ಕೃಷಿ ಆದಾಯ ದುಪ್ಟಟ್ಟುಗೊಳಿಸಿ ರೈತರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ನಿರೀಕ್ಷೆಗಳನ್ನು ಕೇಂದ್ರದ ಬಜೆಟ್ ಹುಸಿಗೊಳಿಸಿದೆ. ಜವಳಿ ಉದ್ಯಮ ಪುನಶ್ಚೇತನ, ಬಂಡವಾಳ ಹೂಡಲು ಉದ್ಯಮಿಗಳ ಆಕರ್ಷಣೆ, ಸಿದ್ದ ಉಡುಪು ರಫ್ತು ಬಗ್ಗೆ ಆದ್ಯತೆ ನೀಡಿಲ್ಲ  
ಶಿವಾನಂದ ಪಾಟೀಲ, ಸಚಿವ 

ಜನಸಾಮಾನ್ಯರ ಪರವಾದ ಬಜೆಟ್

ಕೇಂದ್ರ ಬಜೆಟ್ ಭಾರತವನ್ನು ಅಭಿವೃದ್ಧಿ ಪಥದತ್ತ ಮತ್ತಷ್ಟು ಮುನ್ನಡೆಸಿ ವಿಶ್ವದ 3 ನೇ ದೊಡ್ಡ ಆರ್ಥಿಕತೆ ಇರುವ ದೇಶವಾಗಿ ದಾಪುಗಾಲು ಇರಿಸುವ ನಿಟ್ಟಿನಲ್ಲಿ ಮುನ್ನಡೆ ಇರಿಸಿದೆ. ಜನಸಾಮಾನ್ಯರಿಗೆ ಯಾವ ರೀತಿ ತೆರಿಗೆ ಹೊರೆ ಮಾಡದೇ ಜನಸಾಮಾನ್ಯರ ಪರವಾದ ಬಜೆಟ್ ಮಂಡಿಸಿದ್ದಾರೆ 
ರಮೇಶ ಜಿಗಜಿಣಗಿ, ಸಂಸದ 

ಪ್ರವಾಸೋದ್ಯಮದ ಕಡೆಗಣನೆ

ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿ ಕುರಿತು ಕೇಂದ್ರ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹಂಪಿ ಪರಿಗಣಿಸಿದ್ದಾರೆ. ವಿಜಯಪುರ ಕಡೆಗಣಿಸಿದ್ದಾರೆ.  ಸಂಸದರು ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಪ್ರಸ್ತಾಪ ಮಾಡಿದ್ದರೆ ಅಭಿವೃದ್ಧಿಗೆ ಹಣ ಸಿಗಬಹುದಿತ್ತು.
ಪ್ರೊ.ರಾಜು ಆಲಗೂರ, ಮಾಜಿ ಶಾಸಕ

ಸರ್ವೇ ಜನ ಸುಖಿನೋ ಭವಂತು

ಕೇಂದ್ರ  ಬಜೆಟ್ ಸರ್ವೇ ಜನ ಸುಖಿನೋ ಭವಂತು ಎಂಬ ಆಶಯದ ಪ್ರತೀಕವಾಗಿದೆ. ಕರ್ನಾಟಕಕ್ಕೆ ಹೈ ಸ್ಪೀಡ್ ರೈಲುಗಳ ಕೊಡುಗೆ, ಕರಾವಳಿ ಅಭಿವೃದ್ಧಿಗೆ ಆದ್ಯತೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
 ಉಮೇಶ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಎಸ್.ಸಿ. ಮೋರ್ಚಾ 

ಕರ್ನಾಟಕಕ್ಕೆ ಮಲತಾಯಿ ಧೋರಣೆ

ಕರ್ನಾಟಕದ ಬಹು ನಿರೀಕ್ಷಿತ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆ ಆಗಿಲ್ಲ, ಭದ್ರಾ ಯೋಜನೆಗೂ ನಿರ್ಲಕ್ಷ್ಯ ತೋರಲಾಗಿದೆ. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಲಾಗಿದೆ 
ಡಾ. ಬಾಬುರಾಜೇಂದ್ರ ನಾಯಿಕ, ವಿಜಯಪುರ

ಜನಸಾಮಾನ್ಯ ಸ್ನೇಹಿ ಬಜೆಟ್

ಕೇಂದ್ರ ಬಜೆಟ್ ರೈತ, ಶ್ರೀ ಸಾಮಾನ್ಯನ ಪರವಾಗಿದೆ, ಯಾವ ತೆರಿಗೆ ಹೊರಿಸದೇ ಜನಸಾಮಾನ್ಯ ಸ್ನೇಹಿ ಬಜೆಟ್ ಇದಾಗಿದೆ, ಕೃಷಿ ರಂಗ ಉತ್ತೇಜನ, ಉದ್ಯೋಗ ಸೃಷ್ಟಿ ಆದ್ಯತೆ ಸಂತೋಷ ತಂದಿದೆ
ಗುರುಲಿಂಗಪ್ಪ ಅಂಗಡಿ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ, ವಿಜಯಪುರ

ದೇಶದ ಆರ್ಥಿಕ ಪ್ರಗತಿ ಸಹಾಯಕಾರಿ

ಭವಿಷ್ಯದ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗಾಗಿ ₹10 ಸಾವಿರ ಕೋಟಿ  ಬೆಳವಣಿಗೆ ನಿಧಿಯನ್ನು ಘೋಷಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ. ದೇಶದ ಆರ್ಥಿಕ ಪ್ರಗತಿ ಸಹಾಯಕಾರಿಯಾದ ಬಜೆಟ್‌ 
ಅರುಣ ಶಹಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ 

ಯುವಕರಿಗೆ ಉದ್ಯೋಗ ಸೃಷ್ಟಿ ಇಲ್ಲ

ಹಣದುಬ್ಬರವಿದ್ದರೂ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಯಿಲ್ಲ, ಯುವಕರ ಉದ್ಯೋಗಕ್ಕಾಗಿ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ
ಭೋಗೇಶ್ ಸೋಲಾಪುರ್, ಜಿಲ್ಲಾಧ್ಯಕ್ಷ, ಎಎಪಿ, ವಿಜಯಪುರ 

ಸಮಸ್ಯೆಗಳ ಬಗ್ಗೆ ಉಲ್ಲೇಖವಿಲ್ಲ

ಜನರ ಜೀವನದಲ್ಲಿ ತಲ್ಲಣ ಮೂಡಿಸುತ್ತಿರುವ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಹೆಚ್ಚುತ್ತಿರುವ ನಿರುದ್ಯೋಗ, ಕೈಗಾರಿಕೆಗಳ ಮುಚ್ಚುವಿಕೆ, ಉದ್ಯೋಗ ನಷ್ಟದ ಉಲ್ಬಣ, ರೈತರ ಆದಾಯ ಕುಸಿತದ ಬಗ್ಗೆ ಯಾವುದೇ ಉಲ್ಲೇಖವಿಲ್ಲ
ಬಿ.ಭಗವಾನ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ, ಎಸ್‍ಯುಸಿಐ (ಕಮ್ಯುನಿಸ್ಟ್)

ಜನಸಾಮಾನ್ಯರಿಗೆ ಪ್ರಯೋಜನವಿಲ್ಲ

ಕೇಂದ್ರದ ಬಜೆಟ್‌ ಬೋಗಸ್ ಆಗಿದ್ದು, ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದೊಂದು ಶ್ರೀಮಂತರ ಪರ ಬಜೆಟ್ ಆಗಿದೆ. ಪ್ರತಿ ಬಜೆಟ್‌ನಲ್ಲೂ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಈ ಸಲವೂ ಮುಂದುವರೆದಿದೆ.
 –ಅಬ್ದುಲ್‌ ಹಮೀದ್‌ ಮುಶ್ರೀಫ್, ಕಾಂಗ್ರೆಸ್ ಮುಖಂಡ, ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.