ADVERTISEMENT

ಆಲಮಟ್ಟಿ: ರೈತರ ಬೃಹತ್ ಪ್ರತಿಭಟನೆ; ಜಲಾಶಯ ಮಟ್ಟ ಎತ್ತರಕ್ಕೆ ಆಗ್ರಹ

ಜಲಾಶಯ ಮಟ್ಟ ಎತ್ತರ, ಯುಕೆಪಿ 3ನೇ ಹಂತ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಮಟ್ಟವನ್ನು 519.60 ಮೀಟರ್‌ ದಿಂದ 524.256 ಮೀಟರ್‌ಗೆ ಎತ್ತರಿಸಿ, ನೀರಾವರಿ ಕ್ಷೇತ್ರ ವಿಸ್ತರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಯಾದಗಿರಿ ಭಾಗದ ರೈತರು ಸೋಮವಾರ, ಜಲಾಶಯದ ಪ್ರವೇಶದ್ವಾರದ ಬಳಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. 

ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮಿಕಾಂತ ಪಾಟೀಲ ಅವರು, ‘ಜಲಾಶಯದ ಮಟ್ಟ ಎತ್ತರಿಸಿದರೇ, ಹೆಚ್ಚುವರಿಯಾಗಿ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗಲಿದೆ. ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಯೋಜನೆಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಬಜೆಟ್‌ನಲ್ಲಿ ಯುಕೆಪಿಗೆ ₹ 10 ಸಾವಿರ ಕೋಟಿ ಮೀಸಲಿಡಬೇಕು, ಯೋಜನೆ ಹಂತ-3 ರ ಭೂಸ್ವಾಧೀನಕ್ಕೆ ನೀಡುವ ಪರಿಹಾರದಷ್ಟೇ ಹಣ ಹಂತ-1, ಹಂತ-2 ರ ಯೋಜನೆಯಡಿ ಭೂಸ್ವಾಧೀನ ಆಗುವ ಜಮೀನಿಗೂ ನೀಡಬೇಕು. ಆಲಮಟ್ಟಿ, ನಾರಾಯಣಪುರ ಜಲಾಶಯದಲ್ಲಿನ ಹೂಳು ತೆರವುಗೊಳಿಸಬೇಕು’ ಎಂದರು.

ADVERTISEMENT

ಕೆಬಿಜೆಎನ್ಎಲ್ ಬೆಂಗಳೂರು ಕಚೇರಿಯ ಅಧಿಕಾರಿ ವಿ.ಆರ್. ಹಿರೇಗೌಡರ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಅಭಿಮನ್ಯು, ಬಿ.ಎಸ್. ಪಾಟೀಲ, ತಾರಾಸಿಂಗ್ ದೊಡಮನಿ, ರವಿ ಚಂದ್ರಗಿರಿ ಅವರು ಮನವೊಲಿಸಲು ಯತ್ನಿಸಿದರೂ, ಪ್ರತಿಭಟನಕಾರರು ಮಣಿಯಲಿಲ್ಲ.

ಆಗ ವಿಡಿಯೊ ಕರೆ ಮಾಡಿ ಮಾತನಾಡಿದ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ‘ಜಲಾಶಯ ಮಟ್ಟ ಏರಿಕೆ ಪ್ರಶ್ನಿಸಿ ವಿವಿಧ ರಾಜ್ಯಗಳು ಹಾಕಿರುವ ಪ್ರಕರಣಗಳು ಸುಪ್ರಿಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ’ ಎಂಬುದನ್ನು ಗಮನಕ್ಕೆ ತಂದರು.

ನಂತರ ರೈತರು ಪ್ರತಿಭಟನೆ ಹಿಂಪಡೆದರು. ರೈತ ಹೋರಾಟಗಾರರಾದ ಭೂತಾಳಿ ಕಾರಗುಂಡ, ಬಸವರಾಜ ರಂಜಣಗಿ, ಮಹಾವೀರ ಲಿಂಗೇರಿ, ಇಂದ್ರಜಿತ್ ಯಾದವ, ಮಲ್ಲಿಕಾರ್ಜುನ ಪಾಟೀಲ, ಸಿದ್ಧಲಿಂಗ ಪೂಜಾರಿ, ಮಾಳಿಂಗರಾಯ ಕಾರಣಗುಂಡ, ಶಂಕರಲಿಂಗ ಹುರಸಗುಂಡಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.