
ವಿಜಯಪುರ: ‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಮುಂದೂಡದೇ ಮುಂದಿನ ಎರಡು–ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ಸಹಯೋಗದಲ್ಲಿ ಆಲಮಟ್ಟಿಯಲ್ಲಿ ನಿರ್ಮಿಸಲಾದ ಜಲ ಮನೋರಂಜನಾ ಉದ್ಯಾನವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ಎತ್ತರಕ್ಕೆ ಏರಿಸಲು ಸರ್ಕಾರ ಬದ್ಧವಾಗಿದೆ. ಇದರಿಂದ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗಲಿದ್ದು, 20 ಹಳ್ಳಿಗಳು ಸ್ಥಳಾಂತರಗೊಳ್ಳಬೇಕಾಗುತ್ತದೆ. ಯೋಜನೆಗೆ ಹೆಚ್ಚಿನ ಅನುದಾನ ಅಗತ್ಯವಿರುವುದರಿಂದ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಸಚಿವ ಸಂಪುಟದಲ್ಲಿ ಮನವರಿಕೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ, ಈಗಿನ 130 ಟಿಎಂಸಿ ನೀರಿನ ಬದಲು 233 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಇದರಿಂದ ರಾಜ್ಯದ ಅತಿ ದೊಡ್ಡ ಜಲಾಶಯವಾಗಿ ಆಲಮಟ್ಟಿ ರೂಪುಗೊಳ್ಳಲಿದೆ. ಬ್ರಿಜೇಶ್ ಕುಮಾರ್ ತೀರ್ಪಿನನ್ವಯ 6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಅವಕಾಶ ಸಿಗಲಿದೆ. ನಮ್ಮ ಪಾಲಿನ ಶೇ. 90ರಷ್ಟು ನೀರನ್ನು ರೈತರಿಗೆ ಒದಗಿಸುವ ಉದ್ದೇಶವಿದೆ’ ಎಂದು ಸಚಿವರು ಹೇಳಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಈ ಯೋಜನೆ ನಾಲ್ಕು ರಾಜ್ಯಗಳಿಗೆ ಲಾಭಕಾರಿಯಾಗಲಿದೆ’ ಎಂದು ಹೇಳಿದರು.
‘ಆಲಮಟ್ಟಿ ಜಲಾಶಯಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಹಿರಿಯರು ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತರ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್ ಕವಲಗಿ, ಹಾಗೂ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಮೂರ್ತಿ ಕುಲಕರ್ಣಿ, ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಹಳೆಮನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಆಲಮಟ್ಟಿಯಲ್ಲಿ ಡಿಸ್ನಿ ಪಾರ್ಕ್, ಯಾತ್ರಿನಿವಾಸ, ಡಾರ್ಮಿಟರಿ, ಕೇಬಲ್ ಕಾರ್, ಪ್ಲಾನೇಟೋರಿಯಂ, ಮ್ಯೂಸಿಕಲ್ ಫೌಂಟೇನ್ ಸೇರಿದಂತೆ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.-ಎಂ.ಬಿ.ಪಾಟೀಲ, ಸಚಿವ
ಪಾರ್ಕ್ ಉದ್ಘಾಟನೆಯಾದರೆ ಸಾಲದು. ಇದು ನಿರ್ವಹಣೆ ಕೂಡಾ ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ವರ್ಷಕ್ಕೆ 10 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುವುದರಿಂದ ಈ ಪಾರ್ಕ್ ನಡೆಯುತ್ತದೆ. ಭವಿಷ್ಯದಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಆಲಮಟ್ಟಿಯನ್ನು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.- ಶಿವಾನಂದ ಪಾಟೀಲ, ಸಚಿವ