
ವಿಜಯಪುರ: ನಗರದ ಐತಿಹಾಸಿಕ ಸ್ಮಾರಕ ಆನಂದ ಮಹಲ್ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ಕರಕುಶಲ ಮಳಿಗೆ, ಲ್ಯಾಂಡ್ ಸ್ಕೇಪಿಂಗ್, ಲೈಟಿಂಗ್ ವ್ಯವಸ್ಥೆ, ಕಂಪೌಂಡ್ ನಿರ್ಮಾಣ, ಸಿಸಿ ಟಿವಿ ಸೇರಿದಂತೆ ಪ್ರವಾಸಿ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಸೂಕ್ತ ಯೋಜನಾ ವರದಿ ತಯಾರಿಸಲು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
2025-26ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ವಿಜಯಪುರ ನಗರದ ಆನಂದ ಮಹಲ್ ಆವರಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ₹5 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಘೋಷಿಸಿರುವ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಸರ್ಕಾರಿ ವಸ್ತು ಸಂಗ್ರಹಾಲಯ ನಿರ್ಮಿಸಲು ಅನುಮೋದನೆ ನೀಡಲಾಗಿರುವ ಕಾಮಗಾರಿಗಳ ಕುರಿತು ಚರ್ಚಿಸಿ, ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ₹5 ಕೋಟಿ ವೆಚ್ಚದಲ್ಲಿ ಪಾರಂಪರಿಕ ಆನಂದ ಮಹಲ್ ಕಟ್ಟಡವನ್ನು ಸಂರಕ್ಷಣೆ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ ಎಂದರು.
ಆನಂದ ಮಹಲ್ ಆವರಣ, ಗಗನ ಮಹಲ್, ಮೆಕ್ಕಾ ಮಸೀದ ಹತ್ತಿರ ಇರುವ ಗಾರ್ಡನ್ ಪ್ರದೇಶ, ಕೋಟೆಗೋಡೆ ಆವರಣ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಸಾತ್ ಮಂಜಿಲ್ ಹಾಗೂ ಇನ್ನಿತರೆ ಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಲಕುಮಾರ ಬಣಜಿಗೇರ ತಯಾರಿಸಿರುವ ಪ್ರಾತ್ಯಕ್ಷತೆಯನ್ನು ಪ್ರಸ್ತುತ ಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರಪಾಲಿಕೆ ಆಯುಕ್ತ ವಿಜಜ್ ಮೆಕ್ಕಳಕಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಲಾವರೆನ್ಸ್ ಸಿ.ಎ., ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನಗೊಂಡ, ಹೇರಿಟೇಜ್ ತಜ್ಞರಾದ ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.