
ವಿಜಯಪುರ: ಅನೀಮಿಯಾ ತಡೆಗಟ್ಟುವಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಹೇಳಿದರು.
ಅನೀಮಿಯಾ ಮುಕ್ತ ಭಾರತ ಕಾರ್ಯಕ್ರಮದ ಅಂಗವಾಗಿ ಗುಜರಾತಿನ ಶ್ರೀಮದ್ ರಾಮಚಂದ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಕನ್ನೂರಿನ ಭಾರತೀಯ ಸುರಾಜ್ಯ ಸಂಸ್ಥೆ ಹಾಗೂ ಫೇವಾರ್ಡ-ಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಸ್ವಯಂಸೇವಾ ಸಂಸ್ಥೆಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಅನೀಮಿಯಾ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಇಂದಿನ ಆಹಾರ ಪದ್ಧತಿಯಾಗಿದೆ. ಅನೀಮಿಯಾ ಮುಕ್ತ ಭಾರತಕ್ಕಾಗಿ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸಹಕಾರಿಯಾಗಿ ರಾಜ್ಯದ ವಿವಿಧ ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡಿರುವುದು ಉತ್ತಮ ವಿಚಾರ ಎಂದರು.
ಬಸವಬಾಗೇವಾಡಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಓತಗೇರಿ ಮಾತನಾಡಿ, ಹಿಮೋಗ್ಲಬಿನ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಿ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ ಎಂದರು.
ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಬಾಬು ಸಜ್ಜನ, ಫೇವಾರ್ಡ ಕರ್ನಾಟಕ ಉಪಾಧ್ಯಕ್ಷೆ ಜಯಶ್ರೀ ಹಿರೇಮಠ, ಪೆವಾರ್ಡ ಬೆಳಗಾವಿ ವಿಭಾಗದ ನಿರ್ದೇಶಕಿ ವಜಯಾ ನೆಸರ್ಗಿ, ವಿಜಯಪುರ ಜಿಲ್ಲಾ ಫೇವಾರ್ಡ ಕೆ ಅಧ್ಯಕ್ಷೆ ಸರೋಜಾ ಕೌಲಾಂಪುರ, ಸ್ಪಂದನ ಸಂಸ್ಥೆಯ ಅಧ್ಯಕ್ಷ ಮಾಹಾದೇವ ದೇವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.