ADVERTISEMENT

ಅರ್ಜನಾಳ: ಪಿಕೆಪಿಎಸ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:04 IST
Last Updated 22 ಜನವರಿ 2026, 2:04 IST
ಹೊರ್ತಿ ಸಮೀಪದ ಅರ್ಜನಾಳ ಗ್ರಾಮದಲ್ಲಿ ರೈತರು ಪಿಕೆಪಿಎಸ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು
ಹೊರ್ತಿ ಸಮೀಪದ ಅರ್ಜನಾಳ ಗ್ರಾಮದಲ್ಲಿ ರೈತರು ಪಿಕೆಪಿಎಸ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು   

ಹೊರ್ತಿ: ‘2018-19ನೇ ಸಾಲಿನಲ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿನ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಿದ್ದರೂ, ಅರ್ಜನಾಳ ಪಿಕೆಪಿಎಸ್ ಕಾರ್ಯದರ್ಶಿ ರೈತರಿಂದ ಸಾಲವನ್ನು ಮರು ಪಾವತಿ ಮಾಡಿಸಿಕೊಂಡು, ಮೋಸ ಮಾಡಿದ್ದು ಕೂಡಲೇ ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದು ರೈತ ಮುಖಂಡ ನಿಂಗನಗೌಡ ಬಿರಾದಾರ ಒತ್ತಾಯಿಸಿದರು.

ಅರ್ಜನಾಳ ಗ್ರಾಮದ ಪಿಕೆಪಿಎಸ್‌ಗೆ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ರೈತರಿಗೆ ಮೋಸ ಮಾಡಲಾಗಿದೆ. ಸರ್ಕಾರವೇ ರೈತರ ಸಾಲ ಮನ್ನಾ ಮಾಡಿದ್ದರೂ ಅವರಿಂದ ಹಣ ಕಟ್ಟಿಸಿಕೊಂಡು ವಂಚಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಕೂಡಲೇ ಸಮಗ್ರ ತನಿಖೆ ನಡೆಸಬೇಕು. ಇಲ್ಲಿನ ಕಾರ್ಯದರ್ಶಿಯ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ರೈತರು ಬೀದಿಗಿಳಿದು ತೀವ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅರ್ಜನಾಳ ಪಿಕೆಪಿಎಸ್‌ನಲ್ಲಿ ₹ 23 ಲಕ್ಷ ಹಣ ದುರುಪಯೋಗ ಮಾಡಿದ ನೌಕರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಇಂತಹ ಕೃತ್ಯಗಳು ಜಿಲ್ಲೆಯ ವಿವಿಧ ಸೊಸೈಟಿಗಳಲ್ಲಿ ನಡೆಯುತ್ತಿವೆ. ಇದಕ್ಕೆ ಮೇಲಧಿಕಾರಿಗಳು ತಕ್ಷಣ ಕ್ರಮ ಜರುಗಿಸದಿದ್ದಲ್ಲಿ ಅವರ ಮೇಲೂ ಸಂಶಯ ಪಡಬೇಕಾಗುತ್ತದೆ’ ಎಂದು ಅಭಿ‍ಪ್ರಾಯಪಟ್ಟರು.

ADVERTISEMENT

ಹಯಾತ್ಮ ತೆನೆಳ್ಳಿ ಮಾತನಾಡಿ, ‘ಹಣವನ್ನು ಮರುಪಾವತಿ ಮಾಡಿಸಿಕೊಂಡು, ಹಣದ ರಸೀದಿ ಕೂಡ ಕೊಟ್ಟಿಲ್ಲ. ಕಟ್ಟಿರುವ ಹಣ ಯಾರ ಹಾಗೂ ಯಾವ ಖಾತೆಗೆ ಜಮೆ ಆಗಿದೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ನಾವು ಸಾಲಸೋಲ ಮಾಡಿ ಹಣ ಕಟ್ಟಿದ್ದೇವೆ. ಸಾಲದ ಬಡ್ಡಿ ಕಟ್ಟಲು ಕಷ್ಟ ಪಡುತ್ತಿದ್ದೇವೆ. ಸೊಸೈಟಿಗೆ ಬಂದರೆ, ಅವಾಚ್ಯ ಶಬ್ದಗಳನ್ನು ಬಳಸಿ ಹೊರ ಹಾಕುತ್ತಾರೆ. ನಮ್ಮ ಜಮೀನನ್ನು ಇನ್ನೊಬ್ಬರಿಗೆ ಮಾರುವ ಪರಿಸ್ಥಿತಿ ಬಂದಿದೆ’ ಎಂದು ಅಳಲು ತೋಡಿಕೊಂಡರು.

ರುದ್ರೇಶ ಮಾಳಾಬಾಗಿ (ಲೋಣಿ), ನೀಲಪ್ಪ ತಳವಾರ, ಜಯಶ್ರೀ ಪಾಟೀಲ, ರವೀಂದ್ರ ತಳವಾರ, , ರಮೇಶ ಕತ್ರಿ, ಮಲ್ಲು ಮಾಳಾಬಾಗಿ, ಗೌಡೇಶ ಪಾಟೀಲ, ಸುರೇಶ ಪಾಟೀಲ, ಈರಣ್ಣಗೌಡ ಬಿರಾದಾರ, ರಾಮಣ್ಣ ಅಂಜುಟಗಿ, ಮಲ್ಲು ವಾಲಿಕಾರ, ಶ್ರೀ ಪತಿಗೌಡ ಬಿರಾದಾರ, ಚಿದಾನಂದ ಬನಸೋ ಡೆ, ಜೈಕೃಷ್ಣ ಪಾಟೀಲ, ಬಸು ಬೂದಿಹಾಳ, ಭೀಮರಾವ ಕನ್ನೂರ ಹಾಗೂ ಅರ್ಜನಾಳ ಗ್ರಾಮದ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.