ADVERTISEMENT

ಮನೆಗಳ್ಳರ ಬಂಧನ: ₹2.97 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 14:02 IST
Last Updated 8 ಆಗಸ್ಟ್ 2020, 14:02 IST

ವಿಜಯಪುರ: ಮುದ್ದೇಬಿಹಾಳದಲ್ಲಿ ಆರು ತಿಂಗಳ ಹಿಂದೆ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ₹ 2.97 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ವಿನಾಯಕ ನಗರದ ಸುಮಾ ಪುರಾಣಿಕಮಠ ಅವರ ಮನೆಯ ಬಾಗಿಲ ಕೀಲಿ ಮುರಿದ ಕಳ್ಳರು, ಬೆಡ್‌ರೂಂನಲ್ಲಿದ್ದ ಟ್ರೇಜರಿ ಬಾಗಿಲು ತೆಗೆದು ಬಂಗಾರ, ಬೆಳ್ಳಿ ಹಾಗೂ ನಗದು ಸೇರಿದಂತೆ ಒಟ್ಟು ₹ 3,31,600 ಮೌಲ್ಯದ ವಸ್ತುಗಳನ್ನು ಕಳೆದ ಫೆಬ್ರುವರಿ 27ರಂದು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಮುದ್ದೇಬಿಹಾಳ ಪಟ್ಟಣದಲ್ಲಿಶನಿವಾರ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿಜಯಪುರ ಗಾಂಧಿನಗರದ ಪರಶುರಾಮ ಹಂಚಲಿ (27) ಮತ್ತು ಬಾಗಲಕೋಟೆಯ ಅಂಬಿಗೇರ ಓಣಿಯ ಮರಿಯಪ್ಪ ಕಟ್ಟಿಮನಿ(26) ಅವರನ್ನು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದಾಗ ಆರು ತಿಂಗಳ ಹಿಂದೆ ಮನೆ ಕಳವು ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದರು.

ADVERTISEMENT

ಆರೋಪಿಗಳ ಬಳಿ ಇದ್ದ ₹ 90 ಸಾವಿರ ಮೌಲ್ಯದ 3 ತೊಲಿ ತೂಕದ ತಾಳಿಯ ಚೈನ್‌, ₹1.20ಲಕ್ಷ ಮೌಲ್ಯದ 4 ತೊಲಿ ತೂಕದ ಎರಡು ಬಂಗಾರದ ಪಾಟಲಿ, ₹ 20 ಸಾವಿರ ಮೌಲ್ಯದ ಒಂದು ತೊಲಿ ತೂಕದ ಎರಡು ಉಂಗುರ, ₹15 ಸಾವಿರ ಮೌಲ್ಯದ ಅರ್ಧ ತೊಲಿ ತೂಕದ ಬಂಗಾರದ ಜುಮುಕಿ, ₹45 ಸಾವಿರ ಮೌಲ್ಯದ ಒಂದೂವರೆ ತೊಲಿ ತೂಕದ ಅವಲಕ್ಕಿ ಮಾಟದ ಒಂದು ಚೈನ್‌ ಹಾಗೂ ₹7 ಸಾವಿರ ಮೌಲ್ಯದ ಒಂದು ಬೆಳ್ಳಿ ಆರತಿ ಸೆಟ್‌ ಸೇರಿದಂತೆ ಒಟ್ಟು ₹2.97 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಬಸವನಬಾಗೇವಾಡಿ ಡಿಎಸ್‌ಪಿ ಶಾಂತವೀರ, ಮುದ್ದೇಬಿಹಾಳ ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಎಂ.ಡಿ.ಮಡ್ಡಿ, ಟಿ.ಜಿ.ನೆಲವಾಸಿ, ಸಿಬ್ಬಂದಿಗಳಾದ ಆರ್‌.ಎಸ್‌.ಪಾಟೀಲ, ಎಂ.ಎಂ.ಮಠಪತಿ, ಎಸ್‌.ಎಲ್‌. ಹತ್ತರಕಿಹಾಳ ಅವರಿಗೆ ಬಹುಮಾನ ನೀಡಲಾಗುವುದು ಎಂದು ಎಸ್‌.ಪಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.