ADVERTISEMENT

ಗವಾಯಿ ಮೇಲೆ ಶೂ ಎಸೆಯಲು ಯತ್ನ: ವಿಜಯಪುರ ಬಂದ್ ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:31 IST
Last Updated 16 ಅಕ್ಟೋಬರ್ 2025, 5:31 IST
<div class="paragraphs"><p>ವಿಜಯಪುರ ಬಂದ್ </p></div>

ವಿಜಯಪುರ ಬಂದ್

   

ವಿಜಯಪುರ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟಗಳಿಂದ ಕರೆ ನೀಡಿರುವ ವಿಜಯಪುರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರ ಸಾರಿಗೆ ಸೇರಿದಂತೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ‌. ಜಿಲ್ಲಾ ಕೇಂದ್ರ ಬಸ್ ನಿಲ್ದಾಣ ಬಣಗುಡುತ್ತಿದೆ. ವಿವಿಧ ನಗರಗಳಿಗೆ ತೆರಳಲು ಬಸ್ ಗಳಿಲ್ಲದೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ.

ADVERTISEMENT

ಅಂಗಡಿ–ಮಳಿಗೆಗಳು, ಎಪಿಎಂಸಿ ಮಾರುಕಟ್ಟೆ ಬಾಗಿಲು ತೆರೆದಿಲ್ಲ. ಜನ ಸಂಚಾರ ವಿರಳವಾಗಿದೆ. ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಬ್ಯಾಂಕು, ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಔಷಧ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಮೆರವಣಿಗೆ...

ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಕ್ಕೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ವಾಜಪೇಯಿ ಸರ್ಕಲ್, ಕಿರಾಣ ಬಜಾರ್, ಸಿದ್ಧೇಶ್ವರ ರಸ್ತೆ, ಗಾಂಧಿ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದವರೆಗೆ ನಡೆಯಲಿದ್ದು, ಈ ಮಾರ್ಗದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು, ಈಗಾಗಲೇ ವೇದಿಕೆ ಸಿದ್ಧವಾಗಿದೆ. ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಮದ್ಯ ಮಾರಾಟ ನಿಷೇಧ: ವಿಜಯಪುರ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಇಂದು ಮಧ್ಯರಾತ್ರಿಯವರೆಗೆ ಜಿಲ್ಲಾಡಳಿತ ಮದ್ಯ ಮಾರಾಟ ನಿಷೇಧಿಸಿದೆ.

ಪಿಯುಸಿ ಪರೀಕ್ಷೆ ಮುಂದೂಡಿಕೆ: 'ವಿಜಯಪುರ ಬಂದ್' ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅ.27ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.