ADVERTISEMENT

ಬಸವನಬಾಗೇವಾಡಿ | ಒಳಮೀಸಲಾತಿ ವಿರೋಧಿಸಿ ಬಂಜಾರಾ ಸಮುದಾಯ ಪ್ರತಿಭಟನೆ

ಒಳಮೀಸಲಾತಿ ತೆಗೆಯದಿದ್ದರೆ ಕಾಂಗ್ರೆಸ್ ಸರ್ಕಾರ ಹಠಾವೋ ಚಳುವಳಿ: ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 5:22 IST
Last Updated 4 ಸೆಪ್ಟೆಂಬರ್ 2025, 5:22 IST
ಒಳಮೀಸಲಾತಿ ಜಾರಿ ವಿರೋಧಿಸಿ ಬಸವನಬಾಗೇವಾಡಿ ಪಟ್ಟಣದಲ್ಲಿ ಬುಧವಾರ ಬಂಜಾರಾ ಸಮುದಾಯ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತು
ಒಳಮೀಸಲಾತಿ ಜಾರಿ ವಿರೋಧಿಸಿ ಬಸವನಬಾಗೇವಾಡಿ ಪಟ್ಟಣದಲ್ಲಿ ಬುಧವಾರ ಬಂಜಾರಾ ಸಮುದಾಯ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತು   

ಬಸವನಬಾಗೇವಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ 101 ಜಾತಿಗಳನ್ನು ವಿಂಗಡಿಸಿ‌ ಜಗಳ‌ ಹಚ್ಚುವ ಕೆಲಸ ಮಾಡಿದ್ದಾರೆ. ಅವರು ಎಲ್ಲ ತಾಂಡಾಗಳಲ್ಲಿನ ದುಸ್ಥಿತಿ ಅರಿತು ಕೂಡಲೇ ಒಳ ಮೀಸಲಾತಿ ಎಂಬ ದೊಡ್ಡ ಭೂತವನ್ನು ತೆಗೆದುಹಾಕಬೇಕು, ಇಲ್ಲದಿದ್ದರೆ 'ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ' ಚಳವಳಿ ಮೂಲಕ ಕಾಂಗ್ರೆಸ್ ಸರ್ಕಾರ ತೆಗೆದು ಹಾಕಬೇಕಾಗುತ್ತದೆ ಎಂದು ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಒಳ ಮೀಸಲಾತಿ ವಿರೋಧಿಸಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ತಾಲ್ಲೂಕು ಘಟಕದಿಂದ ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಕೆ ವೇಳೆ ಅವರು ಮಾತನಾಡಿದರು.

ಬಂಜಾರಾ ಮುಖಂಡ ಮಲ್ಲಿಕಾರ್ಜುನ ನಾಯಕ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಮಾಡಿದಾಗ 'ಬಿಜೆಪಿ ಹಠಾವೋ, ತಾಂಡಾ‌ ಬಚಾವೋ' ಹೋರಾಟ ಮಾಡಿ ಸರ್ಕಾರ ಕೆಡವಿದ್ದೇವೆ. ಈಗಿನ ಸರ್ಕಾರ 101 ಜಾತಿಗಳಲ್ಲಿ 63 ಜಾತಿಗಳನ್ನು ಸೇರಿಸಿ ಶೇ 5  ಮೀಸಲಾತಿ ನೀಡಿರುವುದು ಘೋರ ಅನ್ಯಾಯ. 2011 ರ ಜನಗಣತಿಯಂತೆ ರಾಜ್ಯದಲ್ಲಿ ಬಂಜಾರಾ ಸಮುದಾಯ 25 ಲಕ್ಷವಿದೆ. ಆದರೆ ಇವರು ಈಗ 14 ಲಕ್ಷ ಜನಸಂಖ್ಯೆ ತೋರಿಸಿ ಸಮಾಜದ ಕಣ್ಣಿಗೆ ಮಣ್ಣೆರೆಚುವ ಕೆಲಸ‌ ಮಾಡಿದ್ದಾರೆ. ಅನ್ಯಾಯ ಸರಿಪಡಿಸದಿದ್ದರೆ ಯಾವುದೇ ಸರ್ಕಾರವಿದ್ದರೂ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಂಜಾರಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಚವ್ಹಾಣ ಹಾಗೂ ಮುಖಂಡ ರವಿ ರಾಠೋಡ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಒಳಮೀಸಲಾತಿ ವರ್ಗಿಕರಿಸಿದ್ದು, ಬಂಜಾರಾ ಸಮುದಾಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಲ್ಲದೇ ಕಾಂಗ್ರೆಸ್ ಸರ್ಕಾರದಲ್ಲಿ‌ ಬಂಜಾರಾ ಸಮಾಜಕ್ಕೆ ಯಾವುದೇ ಸಚಿವ ಸ್ಥಾನ, ಸಂಸದ, ಎಂಎಲ್ಸಿ ಸ್ಥಾನವೂ ನೀಡದೇ ಕಡೆಗಣಿಸಿದೆ ಎಂದರು.

ಬಂಜಾರಾ ಜಿಲ್ಲಾ ಮುಖಂಡರಾದ ಮಹೇಂದ್ರ ನಾಯಕ್, ನೀಲು ನಾಯಕ ಮಾತನಾಡಿ, ಅವೈಜ್ಞಾನಿಕ ಒಳಮೀಸಲಾತಿ ಜಾರಿ ವಿರೋಧಿಸಿ ಸೆ.6 ರಂದು ವಿಜಯಪುರದಲ್ಲಿ ಜಿಲ್ಲಾಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮುಂದೆ ಸೆ.10ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ವಿಧಾನಸೌಧ ಚಲೋ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಅಷ್ಟರೊಳಗೆ ಸರ್ಕಾರ ಎಚ್ಚೆತ್ತು ಕೂಡಲೇ ಅನ್ಯಾಯ ಸರಿಪಡಿಸದಿದ್ದರೆ ಬಂಜಾರಾ ಸಮಾಜ ಸಚಿವರ ಮನೆಗಳಿಗೆ‌ ಮುತ್ತಿಗೆ ಹಾಗೂ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಂಜಾರಾ ತಾಲ್ಲೂಕು ಘಟಕದ ಅಧ್ಯಕ್ಷ ಬಾಳು ರಾಠೋಡ, ಮುಖಂಡರಾದ ಈಶ್ವರ ಲಮಾಣಿ, ರುಕ್ಮಿಣಿ ರಾಠೋಡ, ಸಂತೋಷ ನಾಯಕ್, ಸುರೇಶ ಬಿಜಾಪುರ, ಶಿವಾಜಿ ಲಮಾಣಿ, ಅರವಿಂದ‌ ನಾಯಕ್, ಭಾಗ್ಯ ರಾಠೋಡ, ಶ್ರೀದೇವಿ ಲಮಾಣಿ  ಭಾಗಿಯಾಗಿದ್ದರು.

ಒಳಮೀಸಲಾತಿ ಜಾರಿ ವಿರೋಧಿಸಿ ಬಸವನಬಾಗೇವಾಡಿ ಪಟ್ಟಣದಲ್ಲಿ ಬುಧವಾರ ಬಂಜಾರಾ ಸಮುದಾಯ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತು

ಬಂಜಾರಾ ಸಮುದಾಯಕ್ಕೆ ಅನ್ಯಾಯ ಒಳಮೀಸಲಾತಿ ಅವೈಜ್ಞಾನಿಕ  ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಸೆ.10ರಂದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.