ADVERTISEMENT

ವಿಜಯಪುರ ನಗರ ಕ್ಷೇತ್ರ| ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ ನಾಮಪತ್ರ ಸಲ್ಲಿಕೆ

ಪ್ರಚಾರಕ್ಕೆ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಆಗಮನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 12:41 IST
Last Updated 15 ಏಪ್ರಿಲ್ 2023, 12:41 IST
ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಸನಗೌಡ  ಪಾಟೀಲ ಯತ್ನಾಳ ಅವರು ಶನಿವಾರ ನಾಮಪತ್ರ ಸಲ್ಲಿಸಿದರು 
ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಸನಗೌಡ  ಪಾಟೀಲ ಯತ್ನಾಳ ಅವರು ಶನಿವಾರ ನಾಮಪತ್ರ ಸಲ್ಲಿಸಿದರು    

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ ಯತ್ನಾಳ ಅವರು ಶನಿವಾರ ನಾಮಪತ್ರ ಸಲ್ಲಿಸಿದರು.

ನಗರದ ಸುಂದರೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿ ಕ್ಯಾ.ಮಹೇಶ ಮಾಲಿಗತ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಏ.18 ರಂದು ಮತ್ತೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದರು.

ADVERTISEMENT

ಕಳೆದ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ. ಹೀಗಾಗಿ ಅಡಂಬರ ಪ್ರಚಾರ ನಡೆಸದೇ, ಅಭಿವೃದ್ಧಿ ಆಧಾರದ ಮೇಲೆ ಮನೆ ಮನೆಗೆ ತೆರಳಿ ಮತ ಕೇಳಲಾಗುವುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಬರಲಿದ್ದಾರೆ ಎಂದು ಹೇಳಿದರು.

ವಿಜಯಪುರ ನಗರದ ಅಭಿವೃದ್ಧಿ, ಶಾಂತಿ, ನೆಮ್ಮದಿ, ಸುರಕ್ಷತೆ, ಹಿಂದುತ್ವದ ವಿಷಯವಾಗಿ ಐದು ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಿ, ಜನರ ಜೀವ ಉಳಿಸಲಾಗಿದೆ ಎಂದರು.

ವಿಜಯಪುರದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸೇರಿದಂತೆ ಸಣ್ಣ, ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಈ ಮೂಲಕ ಸ್ಥಳೀಯ ಯುವಜನರಿಗೆ ಉದ್ಯೋಗ ಒದಗಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟಿ, ಪ್ರೇಮಾನಂದ ಬಿರಾದಾರ, ರಾಹುಲ್‌ ಜಾಧವ,ಎಂ.ಎಸ್.ಕರಡಿ‌, ಮುಖಂಡರಾದ ಗುರುಪಾದಯ್ಯ ಗಚ್ಚಿನಮಠ, ಸತೀಶಚಂದ್ರ ಕುಲಕರ್ಣಿ, ಎನ್.ಎಂ.ಪ್ಯಾಟಿ, ವಿಜಯ ಜೋಶಿ ಇದ್ದರು.

***

ಆರು ನಾಮಪತ್ರ ಸಲ್ಲಿಕೆ

ವಿಜಯಪುರ: ವಿಜಯಪುರ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ ಯತ್ನಾಳ, ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿ ರಾಕೇಶ ಇಂಗಳಗಿ, ಇಂಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ, ಬಬಲೇಶ್ವರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಬೀರಪ್ಪ ಸೊಡ್ಡಿ, ಪ್ರಜಾಕೀಯ ಪಕ್ಷದ ಸಾಬಣ್ಣ ಗಾಂಜಿ, ಬಸವನ ಬಾಗೇವಾಡಿಗೆ ಕೆಆರ್‌ಎಸ್‌ ಪಕ್ಷದಿಂದ ಪ್ರವೀಣಕುಮಾರ ರಾಯಗೊಂಡ ಶನಿವಾರ ನಾಮಪತ್ರ ಸಲ್ಲಿಸಿದರು.

ಒಟ್ಟಾರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಮೊದಲನೇ ದಿನ 17 ಹಾಗೂ ಎರಡನೇ ದಿನ 6 ಸೇರಿದಂತೆ ಒಟ್ಟು 23 ನಾಮಪತ್ರಗಳು ಇದುವರೆಗೆ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.