ಬಸವಣ್ಣ
ನಾಲತವಾಡ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ಜರುಗಿದ್ದು, ಅ. 5 ರಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ಸಂಖ್ಯೆ 4ರ ಗಾಯತ್ರಿ ವಿಹಾರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಸುಮಾರು 500ಕ್ಕೂ ಅಧಿಕ ಬಸವಪರ ಮಠಾಧೀಶರು, ನಾಲತವಾಡ ಸುತ್ತಮುತ್ತಲ ಗ್ರಾಮಸ್ಥರು ಸೇರಿ 60, ಮುದ್ದೇಬಿಹಾಳದಿಂದ 100ಕ್ಕೂ ಹೆಚ್ಚು ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸ್ಥಳೀಯ ಬಸವ ಕೇಂದ್ರದ ಅಧ್ಯಕ್ಷ ಶಂಭುಲಿಂಗಪ್ಪ ದುದ್ದಗಿ ಅವರು ತಿಳಿಸಿದರು.
ಬಸವ ಸಂಸ್ಕೃತಿ ಅಭಿಯಾನಕ್ಕೆ ತೆರಳುವ ಬಸವ ಭಕ್ತರ ಜೊತೆಗೆ ಶುಕ್ರವಾರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಲು ಆದೇಶಿಸಿ ಒಂದು ವರ್ಷ ಪೂರೈಸಿದೆ. ಮುಂದಿನ ಪೀಳಿಗೆಗೆ ಬಸವಣ್ಣನವರ ಜೀವನ ಸಾಧನೆ ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಪ್ರಯುಕ್ತ ಈ ಅಭಿಯಾನ ಜರುಗಿದ್ದು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಸೇರಿದಂತೆ ಹತ್ತಾರು ಬಸವಪರ ಸಂಘಟನೆಗಳ ವತಿಯಿಂದ ಅ. 5ರಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ನಾಲತವಾಡ ಸೇರಿದಂತೆ ಮುದ್ದೇಬಿಹಾಳ ತಾಲ್ಲೂಕಿನಿಂದ ಒಟ್ಟು ಮೂರು ಬಸ್ ವ್ಯವಸ್ಥೆಯನ್ನು ಬಸವಪರ ಸಂಘಟನೆಗಳು ಮಾಡಿದ್ದು, ಕೆಲವರು ವೈಯಕ್ತಿಕವಾಗಿ ಸ್ವಂತ ವಾಹನದ ಮೂಲಕವೂ ತೆರಳುತ್ತಾರೆ. ಅಧಿಕ ಬಸವ ಭಕ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಯೊಬ್ಬರೂ ಬಿಳಿ ವಸ್ತ್ರಧಾರಿಗಳಾಗಿ ಕಾರ್ಯಕ್ರಮಕ್ಕೆ ಬಂದರೆ ಒಂದು ರೀತಿಯ ಮೆರುಗು ಬರುತ್ತದೆ. ಮುದ್ದೇಬಿಹಾಳ ಬಸವ ಭಕ್ತರು ತೆರಳುವ ಶನಿವಾರ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಿಸುವದಾಗಿ ತಿಳಿಸಿದ್ದಾರೆ. ರವಿವಾರ ಬೆಂಗಳೂರಲ್ಲಿ ಊಟ ಉಪಹಾರ ವ್ಯವಸ್ಥೆ ಇರಲಿದೆ. ರವಿವಾರ ಸಂಜೆ ಕಾರ್ಯಕ್ರಮದ ನಂತರ ವಾಪಸ್ ಬರುವಾಗಲೂ ಉಪಹಾರ ಮಾಡಿಸುವುದಾಗಿ ಮುದ್ದೇಬಿಹಾಳ ಬಸವ ಮಹಾ ಮನೆಯವರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಬರಲು ಈಗಾಗಲೇ ನೊಂದಣಿ ಮಾಡಿಸಿರುವ ನಾಲತವಾಡದರಿಗೆ ಶನಿವಾರ ಸಂಜೆ 7ಕ್ಕೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಬಸ್ ಇರಲಿದ್ದು, ಸಕಾಲಕ್ಕೆ ಆಗಮಿಸಲು ತಿಳಿಸಿದರು.
ಈ ವೇಳೆ ಬಸವ ಕೇಂದ್ರದ ಗೌರವಾಧ್ಯಕ್ಷ ಪಿ.ಜಿ. ಬಿರಾದಾರ,ವೀರೇಶ ಇಲಕಲ್, ಗಂಗಣ್ಣ ಜಾವಳಗೇರಿ, ಮಾರುತಿ ಸಿದ್ದಾಪುರ,ಮಂಜು ಕಟ್ಟಿಮನಿ,ರಾಜು ಹಾದಿಮನಿ,ಬಸು ಹಳ್ಳಿ , ನಿಂಗಣ್ಣ ಅಗ್ನಿ,ಎಸ್.ಎನ್.ಕಂಗಳ,ಡಿ.ಆರ್.ಮಳಖೇಡ, ಸಂಗಣ್ಣ ದುದ್ದಗಿ, ಶಿವಪುತ್ರಪ್ಪ ತಾಳಿಕೋಟಿ, ಮಲ್ಲಿಕಾರ್ಜುನ ಹುಣಸಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.