ವಿಜಯಪುರ: ಟ್ರಸ್ಟಿಗೂ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೂ ಸಂಬಂಧವೇ ಇಲ್ಲ, ಪೀಠ ಸ್ಥಾಪನೆ ಮಾಡಿದ್ದು ಭಕ್ತರು, ಹೀಗಾಗಿ ಉಚ್ಚಾಟನೆ ಮಾಡುವ ಅಧಿಕಾರ ಟ್ರಸ್ಟಿಗೆ ಇಲ್ಲ, ಈ ರೀತಿ ನೂರಾರು ಟ್ರಸ್ಟ್‌ಗಳಿವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಕೂಡಲಸಂಗಮ ಪಂಚಮಸಾಲಿ ಪೀಠ ರಚನೆ ಮಾಡಿದ್ದು ಸಮಸ್ತ ಭಕ್ತರು, ಲಿಂಗಾಯತ ಮಠಾಧೀಶರ ಒಕ್ಕೂಟ, ಸಹೃದಯಿ ಸಂತರ ಒಕ್ಕೂಟ ಸೇರಿದಂತೆ ಸಕಲ ಪೂಜ್ಯರ ಸಮಕ್ಷಮದಲ್ಲಿ ಪೀಠ ರಚನೆ ಮಾಡಲಾಗಿದೆ. ಪೀಠ ಸ್ವತಂತ್ರವಾಗಿದೆ. ಈ ಮೊದಲು ಟ್ರಸ್ಟ್ ಪದಾಧಿಕಾರಿಗಳು ಮಠಕ್ಕೆ ಜಾಗ ನೀಡುವುದಾಗಿ ವಾಗ್ದಾನ ಮಾಡಿದ್ದರು. ನಂತರ ನನ್ನನ್ನು ಟ್ರಸ್ಟ್ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದ್ದರೂ ಇದುವರೆಗೂ ಮಾಡಲಿಲ್ಲ. ಇದು ವೈಯುಕ್ತಿಕವಾಗಿ ರಚನೆಯಾಗಿರುವ ಟ್ರಸ್ಟ್, ಪೀಠಕ್ಕೆ ಭೂಮಿ ಕೊಡುವುದಾಗಿ ಹೇಳಿ ಸ್ವಂತಕ್ಕೆ ಜಮೀನು ಮಾಡಿಕೊಂಡರು, ಹೀಗಾಗಿ ಸಮಾಜ ಶಾಶ್ವತ ಎಂದು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕೂಡಲಸಂಗಮವನ್ನು ಮೂಲಪೀಠವಾಗಿಸಿಕೊಂಡು ಭಕ್ತರ ಸಭೆ ನಡೆಸಿ ಶಾಖಾ ಮಠಗಳನ್ನು ಮಾಡಲಾಗುವುದು, ಒಂದು ಗುಡಿಸಲಿನಲ್ಲಿಯೂ ಸಮಾಜ ಸಂಘಟನೆ ಕಾರ್ಯ ನೆರವೇರಿಸಲು ಬದ್ಧ, ಭಕ್ತರ ನಿರ್ಧಾರವೇ ಅಂತಿಮ ಎಂದರು.
ಹಿಂದೂ ಬರೆಯಿಸಿ: ಲಿಂಗಾಯತ ಧರ್ಮಕ್ಕೆ ಇನ್ನೂ ಕೋಡ್ ದೊರಕಿಲ್ಲ, ಇನ್ನೊಂದೆಡೆ ಪಂಚಮಸಾಲಿ ಸಮಾಜದ ಮೀಸಲಾತಿಗೆ ಹಿನ್ನೆಡೆಯಾಗಬಾರದು ಎಂದು ಧರ್ಮ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಯಿಸುವ ನಿರ್ಣಯ ಸ್ವೀಕರಿಸಲಾಗಿದೆ ಎಂದು ಶ್ರೀಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.