ADVERTISEMENT

ಬಸವನಬಾಗೇವಾಡಿ: ಬಸವ ಜನ್ಮಸ್ಥಳ ಅಭಿವೃದ್ಧಿಗೆ ಸಿಗುವುದೇ ಆರ್ಥಿಕ ಬಲ

ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

ಬಸವರಾಜ ಎಸ್.ಉಳ್ಳಾಗಡ್ಡಿ
Published 11 ಫೆಬ್ರುವರಿ 2026, 5:47 IST
Last Updated 11 ಫೆಬ್ರುವರಿ 2026, 5:47 IST
ಬಸವನಬಾಗೇವಾಡಿ ಪಟ್ಟಣದಲ್ಲಿರುವ ಬಸವ ಜನ್ಮ ಸ್ಮಾರಕ
ಬಸವನಬಾಗೇವಾಡಿ ಪಟ್ಟಣದಲ್ಲಿರುವ ಬಸವ ಜನ್ಮ ಸ್ಮಾರಕ   

ಬಸವನಬಾಗೇವಾಡಿ: ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಲಭಿಸಬಹುದೇ ಎಂದು ಸಹಸ್ರಾರು ಬಸವಪ್ರೇಮಿಗಳು, ಅಭಿಮಾನಿಗಳು, ಶರಣ ಚಿಂತಕರು ನಿರೀಕ್ಷೆಯಲ್ಲಿದ್ದಾರೆ.

ಸತತ ಹೋರಾಟದ ಫಲವಾಗಿ ವಿಶ್ವಗುರು ಅಣ್ಣ ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿ ಹಾಗೂ ಇತರೆ ಶರಣರ ಕ್ಷೇತ್ರಗಳಾದ ಹೋರಿಮಟ್ಟಿ ಗುಡ್ಡ, ಇಂಗಳೇಶ್ವರ, ಮಸಬಿನಾಳ, ದೇಗಿನಾಳ, ದೇವರಹಿಪ್ಪರಗಿ, ಶಿವಣಗಿ ಹಾಗೂ ತಂಗಡಗಿ ಮತ್ತು ಸುತ್ತಮುತ್ತಲಿನ ಪರಂಪರ ತಾಣಗಳನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳಗಳಾಗಿ ಸಾಂಸ್ಕೃತಿಕ ಹಾಗೂ ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಲು ಈ ಹಿಂದಿನ ಕೂಡಲಸಂಗಮ ಪ್ರಾಧಿಕಾರದಿಂದ ಪ್ರತ್ಯೇಕಿಸಿ 2024ರ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ.

ಸಿದ್ದರಾಮಯ್ಯ ಅವರು ಈ‌ ಬಾರಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಶೇಷ ಅನುದಾನ ಘೋಷಿಸಿ, ಬಸವ ಜನ್ಮಸ್ಥಳ ಪ್ರತ್ಯೇಕ ಪ್ರಾಧಿಕಾರ ರಚನೆಯನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬುದು ಎಲ್ಲಾ ಬಸವಪ್ರೇಮಿಗಳ ಒತ್ತಾಸೆಯಾಗಿದೆ.

ADVERTISEMENT

₹500 ಕೋಟಿ ಮೀಸಲಿಡಿ :

ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿರುವ ಬಸವನಬಾಗೇವಾಡಿ ಮತಕ್ಷೇತ್ರ ಪ್ರತಿನಿಧಿಸುವ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು, ಈ ಬಾರಿಯ ಬಜೆಟ್‌ನಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹500 ಕೋಟಿ ಪ್ರತ್ಯೇಕ ವಿಶೇಷ ಅನುದಾನ ಮೀಸಲಿಡಲು ಪ್ರಯತ್ನಿಸಿ ಶ್ರಮಿಸುವಂತೆ ಶ್ರೀ‌ ಬಸವೇಶ್ವರ ಸೇವಾ ಸಮಿತಿಯ ಮನವಿ ಸಲ್ಲಿಸಿದ್ದಾರೆ.

ಬಸವನಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ಸುಮಾರು 10-15 ಎಕರೆ ಪ್ರದೇಶದಲ್ಲಿ ಬಸವೇಶ್ವರರ 112 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪನೆಗೆ, 12ನೇ ಶತಮಾನದ ಎಲ್ಲ ಶರಣ ಶರಣೆಯರ ಮೂರ್ತಿಗಳ ಪ್ರತಿಷ್ಠಾಪನೆ, ಹೈಟೆಕ್ ಯಾತ್ರಿ ನಿವಾಸಗಳು, ದಾಸೋಹ ಭವನ, ಮಂಗಲ ಮಂಟಪ, ಬೃಹತ್ ಸಭಾ ಭವನ, ಬಸವೇಶ್ವರರ ಜೀವನ ಚರಿತ್ರಾಧಾರಿತ ಹೈಟೆಕ್ ಆಡಿಟೋರಿಯಂ, ಉದ್ಯಾನಗಳು, ಸಾಮೂಹಿಕ ಇಷ್ಟಲಿಂಗ ಪೂಜಾ ಹಾಗೂ ಧ್ಯಾನ ಮಂದಿರ, ವಚನ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯ‌ ಹೀಗೆ ಅನೇಕ‌ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳಿಸಿ ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಸಚಿವರಿಬ್ಬರೂ ಒತ್ತು ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈರಣ್ಣ ಪಟ್ಟಣಶೆಟ್ಟಿ 
ಬಸವ ಜನ್ಮಸ್ಥಳ ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ವರ್ಷವಾದರೂ ಯಾವುದೇ ಅನುದಾನ ಸಿಗದೇ ಹೆಸರಿಗಷ್ಟೇ ಘೋಷಿಸಿದಂತಾಗಿದೆ. ಬಜೆಟ್‌ನಲ್ಲಿ‌ ₹500 ಕೋಟಿ ವಿಶೇಷ ಅನುದಾನ ಮೀಸಲಿಡಬೇಕು
ಈರಣ್ಣ ಪಟ್ಟಣಶೆಟ್ಟಿಅಧ್ಯಕ್ಷ ಶ್ರೀ‌ ಬಸವೇಶ್ವರ ಸೇವಾ ಸಮಿತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.