
ಬಸವನಬಾಗೇವಾಡಿ ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಪಂಪ್‌ಹೌಸ್ ಮುಂಭಾಗದ ಜಾಗದಲ್ಲಿ ಪುರಸಭೆಯಿಂದ ಸ್ವಚ್ಛತಾ ಕಾರ್ಯ ಕೈಗೊಂಡು ಸ್ವಚ್ಛೋತ್ಸವಕ್ಕೆ ಚಾಲನೆ ನೀಡಲಾಯಿತು
ಬಸವನಬಾಗೇವಾಡಿ: ಪ್ರತಿನಿತ್ಯ ಕಸದ ರಾಶಿಯಿಂದ ತುಂಬಿ ಗಬ್ಬೆದ್ದು ನಾರುತ್ತಿದ್ದ ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಪಂಪ್‌ಹೌಸ್ ಮುಂಭಾಗದಲ್ಲಿ ಪೌರಕಾರ್ಮಿಕರು ಗುರುವಾರ ಮತ್ತು ಶುಕ್ರವಾರ ಸ್ವಚ್ಛತಾ ಕಾರ್ಯ ಕೈಗೊಂಡು ಸುತ್ತಲಿನ ನಿವಾಸಿಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪುರಸಭೆಯಿಂದ ಸ್ವಚ್ಛೋತ್ಸವಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛೋತ್ಸವ ಭಾಗವಾಗಿ ಪಂಪ್‌ಹೌಸ್ ಮುಂಭಾಗದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಂಡು ಕಾಂಪೌಂಡ್ ಮೇಲೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಗೋಡೆ ಬರಹಗಳು, ಚಿತ್ರಗಳನ್ನು ಬಿಡಿಸಿ ಕಸವಿದ್ದ ಜಾಗದಲ್ಲಿ ಗಿಡಗಳನ್ನು ನೆಟ್ಟು ಸುತ್ತಮುತ್ತಲಿನ ನಿವಾಸಿಗಳಿಗೆ ಸ್ವಚ್ಛತೆಯ ಮಹತ್ವ, ಕಸ ಸಂಗ್ರಹಣೆ, ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮಾತನಾಡಿ, ಪಟ್ಟಣದ ಪ್ರತಿಯೊಂದು ವಾರ್ಡ್ ಸ್ವಚ್ಛ, ಸುಂದರ, ಆರೋಗ್ಯಯುತ ಹಾಗೂ ತ್ಯಾಜ್ಯಮುಕ್ತವಾಗಿಸುವ ಉದ್ದೇಶದಿಂದ ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕರು ಕಸ ಸುರಿಯುವ ಇಂತಹ ಸುಮಾರು 9 ತ್ಯಾಜ್ಯ ತುಂಬಿದ ಜಾಗಗಳನ್ನು ಗುರುತಿಸಲಾಗಿದ್ದು, ಇದೇ ಮಾದರಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಸ್ಥಳೀಯ ನಿವಾಸಿಗಳಿಗೆ, ಜನರಿಗೆ ತ್ಯಾಜ್ಯ ಎಸೆಯುವ ರೂಢಿ ತಪ್ಪುವವರೆಗೂ ಸ್ವಚ್ಛಗೊಳಿಸಿದ ಪ್ರತಿ ಸ್ಥಳಗಳಲ್ಲಿ ವಾಟರ್ ಮೆನ್, ಸೂಪರ್‌ವೈಸರ್ ಗಳನ್ನು ಸುಮಾರು ಮೂರು ತಿಂಗಳ ಕಾಲ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತಿದೆ ಎಂದರು.
ಪಟ್ಟಣದ ಖಾಲಿ ಜಾಗಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಲು ಹಾಳೆ ಆಯುವವರ ತಂಡ ರಚಿಸಿ ಅವರಿಗೆ ಪುರಸಭೆಯಿಂದ ಸಹಾಯಧನ ಸಹ ನೀಡಲಾಗುತ್ತಿದೆ. ಮುಂದೆ ಪಟ್ಟಣದಲ್ಲಿ ಏಕಬಳಕೆ ಪ್ಲಾಸ್ಟಿಕ್ ಮಾರುವ, ಬಳಸುವ ದಂಡ ಪ್ರಯೋಗ ಮೂಲಕ ಪ್ಲಾಸ್ಟಿಕ್ ಮುಕ್ತವಾಗಿಸುವ ಕಾರ್ಯ ಮಾಡಲಾಗುವುದು ಎಂದರು.
ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಕುಮಾರ್ ವಂದಾಲ, ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಬಸವರಾಜ ಬೊಳಿಶೆಟ್ಟಿ, ನೈರ್ಮಲ್ಯ ಮೇಲ್ವಿಚಾರಕ ರಾವುತಪ್ಪ ಮ್ಯಾಗೇರಿ, ಯಮನಪ್ಪ ಮಾದರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.