ADVERTISEMENT

ಬೊಮ್ಮಾಯಿ ಬದಲಾವಣೆ ವಿಷಯ; ಕಾರ್ಯಕರ್ತರಿಗೆ ತಪ್ಪು ಸಂದೇಶ- ಸಂಸದ ರಮೇಶ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 12:56 IST
Last Updated 20 ಡಿಸೆಂಬರ್ 2021, 12:56 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಕೇವಲ 100 ದಿನಗಳಾಗಿವೆ. ಆಗಲೇ ಅವರನ್ನು ಬದಲಾಯಿಸುವ ಚರ್ಚೆ ನಡೆದರುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ.ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡು ಹಿಡಿದು, ಅವರ ಬಾಯಿಗೆ ಬೀಗ ಹಾಕಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಷಯ ಕುರಿತು ಎದ್ದಿರುವ ಅಪಸ್ವರಕ್ಕೆ ಪಕ್ಷದ ವರಿಷ್ಠರ ಸ್ಪಷ್ಟ ಅಭಿಪ್ರಾಯ ಅಗತ್ಯ ಎಂಬ ಮಾತುಗಳು ಕಾರ್ಯಕರ್ತರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಗೆ ಒಳಗಾಗುತ್ತಲೆ ಇರುತ್ತದೆ. ಹಿಂದಿನ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳಾದರು. ಈ ಅವಧಿಯಲ್ಲಿ ಬೊಮ್ಮಾಯಿ ಎರಡನೆಯವರು. ಇದೀಗ ಅವರನ್ನು ಬದಲಾಯಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವುದು ಖಚಿತ ಎಂದವರು ಎಚ್ಚರಿಸಿದ್ದಾರೆ.

ADVERTISEMENT

ವರಿಷ್ಠರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಸಲವೂ ಹೀಗೆ ಮಾಡುತ್ತ ಹೋದರೆ ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ. ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಬೊಮ್ಮಾಯಿ ವಲಸಿಗರು’ ಎಂದು ಬದಲಾವಣೆ ಮಾತನಾಡುವದು ತಪ್ಪು. ಅವರೊಂದಿಗೆ 17 ವರ್ಷಗಳ ಹಿಂದೆ ಅನೇಕ ಜನತಾ ಪರಿವಾರದ ನಾಯಕರು ಬಿಜೆಪಿ ಸೇರಿದ್ದಾರೆ. ನಾವೆಲ್ಲ ಹೊರಗಿನಿಂದ ಬಂದಿದ್ದರೂ ಬಿಜೆಪಿ ಸಿದ್ಧಾಂತಕ್ಕೆ ಬದ್ಧರಾಗಿಯೆ ಬಂದಿದ್ದೇವೆ. ಇದು ಪಕ್ಷದ ವರಿಷ್ಠರಿಗೂ ಗೊತ್ತು. ಹೀಗಾಗಿ, ಬೊಮ್ಮಾಯಿ ಬದಲಾವಣೆ ವಿಷಯ ಸಾಕಷ್ಟು ಅಸಮಾಧಾನಕ್ಕೂ ಕಾರಣವಾಗಬಹುದು. ಅಲ್ಲದೆ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಲೂ ಬಹುದು. ಇದೆಲ್ಲ ಪಕ್ಷದ ಭವಿಷ್ಯಕ್ಕೆ ಕುಂದು ತರಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.