ವಿಜಯಪುರ: ‘ಭಗತ್ ಸಿಂಗ್ ಕೇವಲ ಸ್ವಾತಂತ್ರ್ಯದ ಕನಸು ಕಾಣಲಿಲ್ಲ. ಬ್ರಿಟಿಷರ ನಂತರ ನಮ್ಮ ದೇಶದಲ್ಲಿ ಸಮ ಸಮಾಜದ ನಿರ್ಮಾಣದ ಕನಸು ಕಂಡಿದ್ದರು’ ಎಂದು ಎಐಡಿವೈಒ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ ಹೇಳಿದರು.
ನಗರದ ಎಸ್.ಬಿ. ವಿಜ್ಡಮ್ ಕೆರಿಯರ್ ಅಕಾಡೆಮಿಯಲ್ಲಿ ಎಐಡಿವೈಒ ಜಿಲ್ಲಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 118ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
‘ಗಾಂಧೀಜಿ ಸಂಧಾನಪರ ಪಂಥದ ನಾಯಕರಾದರೆ, ಭಗತ್ ಸಿಂಗ್ ಹಾಗೂ ನೇತಾಜಿ ಅವರು ಸಂಧಾನರಹಿತ ಪಂಥದ ಅಗ್ರಗಣ್ಯ ನಾಯಕರು. ಸಂಧಾನಪರ ಪಂಥದವರು ಕೆಲವು ಸವಲತ್ತುಗಳಿಗಾಗಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಕೊಡುವುದಕ್ಕೆ ಸೀಮಿತವಾಗಿದ್ದರು. ಆದರೆ, ಸಂಧಾನಾತೀತ ಪಂಥವು ಬ್ರಿಟೀಷರು ದೇಶ ಬಿಟ್ಟು ತೊಲಗಬೇಕೆಂದು ಹೋರಾಟ ನಡೆಸಿದ್ದರು’ ಎಂದರು.
‘ದೇಶದಲ್ಲಿ ಜಾತಿ-ಮತಗಳ ಅಸಮಾನತೆ ಇಲ್ಲದ, ರೈತರ ಸಂಕಷ್ಟಗಳನ್ನು ದೂರ ಮಾಡುವ, ಮಹಿಳೆಗೆ ಸಮಾನತೆ ಹಾಗೂ ಭದ್ರತೆ ಖಾತ್ರಿ ಪಡಿಸುವ, ಎಲ್ಲರಿಗೂ ಉಚಿತ ಶಿಕ್ಷಣ, ಉದ್ಯೋಗ ನೀಡುವ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ, ಆ ಕನಸನ್ನು ಭ್ರಷ್ಟ ಆಡಳಿತ ನುಚ್ಚುನೂರು ಮಾಡಿದೆ’ ಎಂದು ಹೇಳಿದರು.
ಎಸ್.ಬಿ. ವಿಜ್ಡಮ್ ಕೆರಿಯರ್ ಅಕಾಡೆಮಿ ಉಪನ್ಯಾಸಕ ಸಿದ್ದು ಗುರನಾಳ ಮಾತನಾಡಿ, ‘ಗಲ್ಲು ಶಿಕ್ಷೆಗೆ ರಿಯಾಯಿತಿ ಕೋರಿ ಭಗತ್ ಸಿಂಗ್ ಅವರ ತಂದೆ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದಾಗ, ನೀವು ಬ್ರಿಟಿಷರ ಕ್ಷಮೆ ಕೇಳಿ ನನ್ನ ಹೋರಾಟಕ್ಕೆ ದ್ರೋಹ ಬಗೆದಿರಿ ಎಂಬುದಾಗಿ ಭಗತ್ ಹೇಳುತ್ತಾರೆ. ಅಂತಹ ತಲೆಭಾಗದ ಕ್ರಾಂತಿಕಾರಿ ಭಗತ್ ಯುವಕರಿಗೆ ಆದರ್ಶವಾಗಬೇಕು’ ಎಂದು ತಿಳಿಸಿದರು.
ಎಸ್.ಬಿ. ವಿಜ್ಡಮ್ ವ್ಯವಸ್ಥಾಪಕ ಪ್ರಭುಗೌಡ ರೆಡ್ಡಿ ಮಾತನಾಡಿ, ‘ದೇಶದ ಯುವಕರ ಕಣ್ಮಣಿಯಾದ ಮಹಾನ್ ಕ್ರಾಂತಿಕಾರಿ ಭಗತ್‍ಸಿಂಗ್. ಅವರು ಇಡೀ ದೇಶದ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಿದರು’ ಎಂದು ಹೇಳಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ್ ಮಾತನಾಡಿ, ‘ಈ ದೇಶದಲ್ಲಿ ಮಾನವನಿಂದ ಮಾನವನ ಶೋಷಣೆ ಕೊನೆಗೊಂಡು ಎಲ್ಲರೂ ಶಿಕ್ಷಣ, ಉದ್ಯೋಗ, ಭದ್ರತೆ ಪಡೆಯುವಂತಾಗಲಿ ಎಂಬ ಕನಸನ್ನು ಭಗತ್ ಸಿಂಗ್ ಕಂಡಿದ್ದರು’ ಎಂದರು.
ಉಪಾಧ್ಯಕ್ಷರಾದ ಅಶೋಕ್ ದೇಸಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್ ಕೊಂಡಗೂಳಿ, ಕಾಂತು ನಾಯಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.