ADVERTISEMENT

ಇಂಡಿ: ಎರಡು ರಾಜ್ಯ ಬೆಸೆಯಲಿರುವ ಭೀಮಾ ಸೇತುವೆ

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಿಂದ ಭೂಮಿಪೂಜೆ ಜುಲೈ 14ಕ್ಕೆ

ಎ.ಸಿ.ಪಾಟೀಲ
Published 12 ಜುಲೈ 2025, 5:58 IST
Last Updated 12 ಜುಲೈ 2025, 5:58 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ಇಂಡಿ: ತಾಲ್ಲೂಕಿನ ಭೀಮಾ ನದಿ ತೀರದ 30ಕ್ಕಿಂತಲೂ ಹೆಚ್ಚು ಹೊಳೆದಂಡೆಯ ಹಳ್ಳಿಗಾಡಿನ ಜನರು ತಮ್ಮ ದೈನಂದಿನ  ಅವಶ್ಯಕತೆಗಳಿಗಾಗಿ ಜಿಲ್ಲಾ ಕೇಂದ್ರವಾದ ವಿಜಯಪುರಕ್ಕಿಂತ ನದಿ ಆಚೆಗಿನ ಸೋಲಾಪುರ ನಗರದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಇಂಡಿ ಕ್ಷೇತ್ರ ಸೇರಿದಂತೆ ಜಿಲ್ಲೆಯ ನಾನಾ ಭಾಗದ ಜನರು ಮೈದುಂಬಿ ಹರಿಯುವ ಭೀಮಾ ನದಿ ದಾಟಲು ಸೂಕ್ತ ಸೇತುವೆ ಇಲ್ಲದಿರುವನ್ನು ಮನಗಂಡು ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೊಸದೊಂದು ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ಇಂಡಿ ತಾಲ್ಲೂಕಿನ ಪಡನೂರ ಹಾಗೂ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಅಂಕಲಗಿ ಗ್ರಾಮಗಳ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ₹ 65 ಕೋಟಿ ವೆಚ್ಚದಲ್ಲಿ ಸೇತುವೆಯೊಂದನ್ನು ನಿರ್ಮಿಸಲು ಶಾಸಕರು ಮುಹೂರ್ತ ನಿಗದಿಗೊಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಐತಿಹಾಸಿಕ ಭೀಮಾ ಸೇತುವೆಗೆ ಜುಲೈ 14 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಭೀಮಾತೀರದಲ್ಲಿ ಗಡಿ, ನುಡಿಯನ್ನು ಮೀರಿ ಕರ್ನಾಟಕ–ಮಹಾರಾಷ್ಟ್ರ ನಡುವೆ ಹೊಸ ಬಾಂಧವ್ಯಕ್ಕೆ ಈ ಸೇತುವೆ  ಅಕ್ಷರಶಃ ಸೇತುವೆಯಾಗಲಿದೆ. ಕನ್ನಡಿಗರ ಹಾಗೂ ಮರಾಠಿಗರ ನಡುವಿನ ಸಂಪರ್ಕದ ಕೊಂಡಿಯಾಗಲಿದೆ.  

ಈ ಭಾಗದ ಅಭಿವೃದ್ಧಿಗೆ ಹೊಸ ಶೆಕೆ ಬರೆಯಲಿದೆ ಎನ್ನುತ್ತಾರೆ ನೆರೆಯ ಅಕ್ಕಲಕೋಟ ತಾಲ್ಲೂಕಿನ ತಡವಾಳ ಗ್ರಾಮದ ನಿವಾಸಿ ಹಾಗೂ ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಮಾನಶೆಟ್ಟಿ.

ಪಡನೂರ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ಸೇತುವೆಯಿಂದ ಮಳೆಗಾಲದಲ್ಲಿ ಭೀಮಾ ನದಿ ದಾಟುವುದೇ ಖುಷಿಯ ವಿಷಯ ಎನ್ನುತ್ತಾರೆ ಪಡನೂರಿನ ನಿವಾಸಿ, ಇಂಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಂಚು ಅರವತ್ತು.

ಭೀಮಾ ನದಿಗೆ ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯೋಗ ಉದ್ಯಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪುಷ್ಟಿ ಸಿಗಲಿದೆ. ಎರಡು ರಾಜ್ಯವನ್ನು ಪರಸ್ಪರ ಬೆಸೆಯುವ ಈ ಸೇತುವೆ ಹೊಳೆದಂಡೆಯ ಜನರ ಬದುಕಿನ ಸೇತುವೆಯಾಗಲಿದೆ
ಯಶವಂತರಾಯಗೌಡ ಪಾಟೀಲ ಶಾಸಕ ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.