ಬಸವನಬಾಗೇವಾಡಿ: ‘ಕುದರಿಸಾಲವಾಡಗಿ ಗ್ರಾಮದವರಾಗಿರುವ ದೇವರಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ್ ಅವರಿಗೆ ಅವರೂರಿನವರಿಗೆ ನ್ಯಾಯ ಕೊಡಿಸಲು ಆಗಿಲ್ಲ. ಇಂಥವರು ತಮ್ಮ ಮತಕ್ಷೇತ್ರಕ್ಕೆ ಏನು ನ್ಯಾಯ ಕೊಡಿಸುತ್ತಾರೆ. ಶಾಸಕರಾಗಿ ಮೊದಲು ನಿಮ್ಮ ಮನೆ, ಗ್ರಾಮ ರಕ್ಷಿಸಿಕೊಳ್ಳಲು ಮುಂದಾಗಿ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಶಾಸಕ ರಾಜುಗೌಡ ಪಾಟೀಲರಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಹಿನ್ನೆಲೆ ಅಗಲೀಕರಣ ವಿಚಾರದಲ್ಲಿ ಸುಮಾರು 143 ಮನೆಗಳನ್ನು ಕೆಡವಿದ್ದನ್ನು ಅವರು ಖಂಡಿಸಿದರು.
ಮನೆ ಕಳೆದುಕೊಂಡ ನೂರಾರು ನಿರಾಶ್ರಿತರು ಸೂಕ್ತ ಪರಿಹಾರ ಹಾಗೂ ನೂತನ ಮನೆಗಳನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಕಚೇರಿ ಮುಂಭಾದಲ್ಲಿ ಮೂರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಸಂಜೆ ಅವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದರು.
ಅಹಿಂದ ಹೆಸರಲ್ಲಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಬಳಿಕ ಅಹಿಂದ ವರ್ಗವನ್ನು ಬೀದಿಗೆ ತರುತ್ತಿದ್ದಾರೆ. ಬಡವರಿಗೆ ನ್ಯಾಯ ಸಿಗದಿದ್ದರೆ, ಈ ಕುರಿತು ರಾಜ್ಯ ಬಿಜೆಪಿ ವರಿಷ್ಠರ ಗಮನಕ್ಕೆ ತಂದು ರಾಜ್ಯಮಟ್ಟದಲ್ಲಿ ಹೋರಾಟದ ಮೂಲಕ ಬಡ ನಿರಾಶ್ರಿತರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದರು. ಮನೆ ಕಳೆದುಕೊಂಡವರ ನೋವಿಗೆ ಸ್ಪಂದಿಸಿ ಶಾಸಕರು ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿ, ಗ್ರಾಮದಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಬಡವರ ಮನೆಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸುರೇಶ ಬಿರಾದಾರ, ಬಿಜೆಪಿ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ರಜಾಕಸಾಬ್ ವಾಲಿಕಾರ, ಬಿಜೆಪಿ ಮಂಡಲ ಅಧ್ಯಕ್ಷ ಅವಣ್ಣ ಗ್ವಾತಗಿ, ಮುಖಂಡರಾದ ಬಸವರಾಜ ಹಳ್ಳಿ, ಡಾ.ಹಸನಸಾಬ ಢವಳಗಿ, ಆದಮ್ ಸಾಬ ಢವಳಗಿ, ಮಹಾದೇವಪ್ಪ ಸಜ್ಜನ, ಯೋಗೇಶ ಕನ್ನೂರ, ನಜೀರ ಪಟೇಲ್ ಗುಡ್ನಾಳ, ಅಜೀಜ ಹೆಬ್ಬಾಳ, ಯಾಕೂಬ ಯಲಗಾರ, ಶ್ರೀಕಾಂತ ಹಚಡದ, ಪ್ರಮೋದ ಹಚಡದ, ಭೀಮಣ್ಣ ಕತಗಾರ, ಶರಣಪ್ಪ ಕತಗಾರ, ಮಾಳಪ್ಪ ಕಡ್ಲಿಮಟ್ಟಿ, ಗಣಿ ಮುಲ್ಲಾ,
ಗುರು ಗುಡಿಮನಿ, ಪವಾಡೆವ್ವ ಇಂಗಳಗಿ, ಹಜರತಿಬಿ ಅಕ್ತಾರ, ಸಕೀನಾ ಯಲಗಾರ, ಕಾಮಣ್ಣ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.