ADVERTISEMENT

ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮುತ್ತಿಗೆ ಯತ್ನ,ಸಂಸದ ಡಿ.ಕೆ.ಸುರೇಶ ವಿರುದ್ಧ ಘೋಷಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 12:29 IST
Last Updated 4 ಜನವರಿ 2022, 12:29 IST
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದ ಸಮೀಪ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದ ಸಮೀಪ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು   

ವಿಜಯಪುರ: ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್‌ ಗೂಂಡಾ ವರ್ತನೆ ತೋರಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಇಲ್ಲಿನಜಲನಗರ ಕ್ರಾಸ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ನಂತರ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಬಿಜೆಪಿ ಕಾರ್ಯಕರ್ತರು ಡಿ.ಕೆ. ಸುರೇಶ ಅವರ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿದರು.

ADVERTISEMENT

ಜವಾಬ್ದಾರಿ ಸ್ಥಾನದಲ್ಲಿರುವ ಸಂಸದ ಡಿ.ಕೆ. ಸುರೇಶ್‌ ಗೂಂಡಾ ವರ್ತನೆ ತೋರಿದ್ದಾರೆ. ಉನ್ನತ ಶಿಕ್ಷಣ ಸಚಿವರು ಸಮಾಧಾನ ಚಿತ್ತದಿಂದ ಮಾತನಾಡುವಾಗ ಅವರ ಭಾಷಣಕ್ಕೆ ಅಡ್ಡಿಪಡಿಸಿ ಮೈಕ್ ಕಿತ್ತುಕೊಂಡು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಈ ರೀತಿ ಸಚಿವರ ಮೇಲೆ ದರ್ಪ ತೋರಿದ ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರವಿ ನಡೆ ಖಂಡನಾರ್ಹ. ಕೂಡಲೇ ಈ ಇಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಚಿವರ ಮೇಲೆಯೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದರೆ ಜನಸಾಮಾನ್ಯರ ಪಾಡೇನು? ಜನಪ್ರತಿನಿಧಿಯಾಗಿ ತಮ್ಮ ಕ್ಷೇತ್ರದ ಜನತೆಗೆ ಯಾವ ರೀತಿ ಸೇವೆ ಮಾಡುತ್ತಾರೆ? ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದರು.

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಅಣಿಯಾದಾಗ ತಕ್ಷಣೇ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಶಿವರುದ್ರ ಬಾಗಲಕೋಟ, ಶ್ರೀಕಾಂತ ಶಿಂಧೆ, ರವಿ ಉಪ್ಪಲದಿನ್ನಿ, ಮಳುಗೌಡ ಪಾಟೀಲ, ಸಂದೀಪ ಪಾಟೀಲ, ಪಾಪುಸಿಂಗ್ ರಜಪೂತ, ರಾಹುಲ್ ಜಾಧವ, ಸತೀಶ ಪಾಟೀಲ, ಪ್ರವೀಣಕೂಡಗಿ, ಪ್ರಶಾಂತ ಪೂಜಾರಿ, ನಿಖಿಲ್ ಚೌಧರಿ, ರಾಜೇಶ ತಾವಸೆ, ರಜನಿ ಸಂಬಣ್ಣಿ, ಮಲ್ಲಮ್ಮ ಜೋಗೂರ, ಗೋಪಾಲ ಘಟಕಾಂಬಳೆ, ಡಾ.ಬಾಬುರಾಜೇಂದ್ರ ನಾಯಕ, ರಾಜು ವಾಲಿ, ವಿನಾಯಕ ದಹಿಂಡೆ, ಆನಂದ ಮುಚ್ಚಂಡಿ, ಕಿರಣ ರಾಠೋಡ, ಪ್ರೇಮ ಬಿರಾದಾರ, ವಿಠ್ಠಲ ನಡುವಿನಕೇರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.