ADVERTISEMENT

ಜನರ ಭಾವನೆ ಕೆರಳಿಸುವುದೇ ಬಿಜೆಪಿ ಕೆಲಸ: ಎಂ ಬಿ.ಪಾಟೀಲ

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ವಿತರಣೆ; ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 16:31 IST
Last Updated 3 ಮಾರ್ಚ್ 2023, 16:31 IST
ತಿಕೋಟಾ ತಾಲ್ಲೂಕಿನ ಯತ್ನಾಳ, ಜಾಲಗೇರಿ, ಟಕ್ಕಳಕಿ, ಇಂದರಾನಗರ, ಹುಬನೂರ, ಅರಕೇರಿ ಮತ್ತು ಸಿದ್ದಾಪುರ ಗ್ರಾಮಗಳಲ್ಲಿ ಬೂತ್‌ ಮಟ್ಟದ ಮತದಾರರಿಗೆ ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಪತ್ರವನ್ನು ಎಂ.ಬಿ.ಪಾಟೀಲ, ಸುನೀಲಗೌಡ ಪಾಟೀಲ ವಿತರಿಸಿದರು
ತಿಕೋಟಾ ತಾಲ್ಲೂಕಿನ ಯತ್ನಾಳ, ಜಾಲಗೇರಿ, ಟಕ್ಕಳಕಿ, ಇಂದರಾನಗರ, ಹುಬನೂರ, ಅರಕೇರಿ ಮತ್ತು ಸಿದ್ದಾಪುರ ಗ್ರಾಮಗಳಲ್ಲಿ ಬೂತ್‌ ಮಟ್ಟದ ಮತದಾರರಿಗೆ ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಪತ್ರವನ್ನು ಎಂ.ಬಿ.ಪಾಟೀಲ, ಸುನೀಲಗೌಡ ಪಾಟೀಲ ವಿತರಿಸಿದರು   

ತಿಕೋಟಾ: ಕಾಂಗ್ರೆಸ್ಸಿನ ಹಿರಿಯ ನಾಯಕರು ರಾಜ್ಯವನ್ನು ಕಟ್ಟಿದರು. ಆದರೆ ಈಗ ಬಿಜೆಪಿಯ ದುರಾಡಳಿತದಿಂದಾಗಿ ನಾಡಿನ ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಒಳಿತಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಗತ್ಯ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ.ಪಾಟೀಲ ಹೇಳಿದ್ದಾರೆ.

ತಾಲ್ಲೂಕಿನ ಯತ್ನಾಳ, ಜಾಲಗೇರಿ, ಟಕ್ಕಳಕಿ, ಇಂದಿರಾನಗರ, ಹುಬನೂರ, ಅರಕೇರಿ ಮತ್ತು ಸಿದ್ದಾಪುರ ಗ್ರಾಮಗಳಲ್ಲಿ ಶುಕ್ರವಾರ ಬೂತ್‌ ಮಟ್ಟದ ಮತದಾರರಿಗೆ ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.

ಜನರ ಭಾವನೆ ಕೆರಳಿಸುವುದೇ ಬಿಜೆಪಿ ಕೆಲಸವಾಗಿದೆ. ಮೋದಿ ಅವರು ನೀಡಿದ್ದ ಭರವಸೆಗಳೆಲ್ಲವೂ ಈಗ ಹುಸಿಯಾಗಿವೆ. ಬೆಲೆಯೇರಿಕೆಯಿಂದಾಗಿ ಜನತೆ ತತ್ತರಿಸಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಹೆಚ್ಚುತ್ತಿದೆ ಹೊರತು ಜನರಿಗೆ ಅವುಗಳನ್ನು ಖರೀದಿಸುವ ಸಾಮರ್ಥ್ಯ ಹೆಚ್ಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘2013ರಿಂದ 2018ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವನಾಗಿ ಅಸಾಧ್ಯವಾದ ಕೆಲಸವನ್ನು ಮಾಡುವ ಮೂಲಕ ಈ ಬರಪೀಡಿತ ಪ್ರದೇಶದಲ್ಲಿ ನೀರಾವರಿ ಕೆಲಸ ಮಾಡಿದ್ದೇನೆ. ದೇವರು ನನ್ನ ಮೂಲಕ ಈ ಕೆಲಸ ಮಾಡಿಸಿದ್ದಾನೆ. ಲಿಂ. ಸಿದ್ಧೇಶ್ವರ ಸ್ವಾಮೀಜಿ ಮತ್ತು ನಮ್ಮ ತಂದೆಯವರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಯಾರು ಒಳ್ಳೆಯವರು, ಕೆಟ್ಟವರು ಎಂಬುದು ತಮಗೆಲ್ಲರಿಗೂ ಗೊತ್ತಿದೆ. ಮದ್ಯದಂಗಡಿ ಬಂದ್ ಮಾಡಲು ಈ ಭಾಗದ ಮಹಿಳೆಯರು ಹೋರಾಟ ಮಾಡುತ್ತಾರೆ. ಆದರೆ, ಮದ್ಯದಂಗಡಿ ಹೊಂದಿದವರೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸುತ್ತಿದ್ದಾರೆ. ಕಳೆದ ಬಾರಿಯೇ ಕೊನೆಯ ಚುನಾವಣೆ ಎಂದು ಘೋಷಿಸಿದವರು ಈಗ ಮತ್ತೆ ಸ್ಪರ್ಧಿಸಲು ಮುಂದಾಗುತ್ತಿದ್ದಾರೆ. ಇಂಥವರಿಗೆ ಮತ ಹಾಕಿದರೆ ಪ್ರತಿಯೊಂದು ಊರಲ್ಲಿ ಮದ್ಯದ ಅಂಗಡಿ ತೆರೆಯುತ್ತಾರೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಕೊಡುವ ಕಾಂಗ್ರೇಸ್‌ಗೆ ಮತ ನೀಡಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಎಸ್. ಎಚ್. ನಾಡಗೌಡ, ಸೋಮನಾಥ ಬಾಗಲಕೋಟ, ಸುನೀಲಗೌಡ ಈರನಗೌಡ ಪಾಟೀಲ, ಕಲ್ಲಪ್ಪ ಚವ್ಹಾಣ, ತನುಜಾ ಸಂತೋಷ ಶಿಂಗೆ, ವಸಂತ ಚವ್ಹಾಣ, ಲಾಲಸಿಂಗ ನಾಯಕ, ದೊಂಡಿರಾಮ ಪೂಜಾರಿ, ಪರಶುರಾಮ, ಮಾಳಕರಿ, ತಾನಾಜಿ ಜಾಧವ, ಅನೀಲ ಚವ್ಹಾಣ, ಅರವಿಂದ ಚವ್ಹಾಣ, ರಮ್ಯ ಸುನೀಲ ಸಾಗರ, ನೀಲವ್ವ ಸೋಮನಿಂಗ ಬನಸೋಡೆ, ಶಾಂತವ್ವ ಬನಸೋಡೆ. ಮಾಲುಬಾಯಿ ರಾಠೋಡ, ಪಾರುಬಾಯಿ ಚವ್ಹಾಣ, ರುಕ್ಮಾಬಾಯಿ ಚವ್ಹಾಣ, ಮೀರಾಬಾಯಿ ಚವ್ಹಾಣ ಇದ್ದರು.

ಅಂಬಾನಿ, ಅದಾನಿ ಸಾಲಮನ್ನಾ ಮಾಡಿದ ಮೋದಿ
ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ₹ 72,000 ಕೋಟಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹ 8500 ಕೋಟಿ ಸಾಲಮನ್ನಾ ಮಾಡಿದ್ದಾರೆ. ಆದರೆ, ಮೋದಿ ಅವರು, ಅಂಬಾನಿ ಮತ್ತು ಅದಾನಿ ಸೇರಿದಂತೆ ನಾನಾ ಉದ್ಯಮಿಗಳ ₹ 20 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಇದು ಮೋದಿ ಅವರ ಅಚ್ಛೇದಿನ ಆಗಿದೆ. ಆದರೆ, ಜನರಿಗೆ ಎದುರಾಗಿರುವ ಆರ್ಥಿಕ ಹೊರೆಯನ್ನು ತೊಡೆದು ಹಾಕಲು ಕಾಂಗ್ರೆಸ್ ಈಗಾಗಲೇ ಮೂರು ಗ್ಯಾರಂಟಿಗಳನ್ನು ಘೋಷಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.