
ವಿಜಯಪುರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ ಎಲ್ಲರಿಗೂ ಸಚಿವ ಸ್ಥಾನ ದೊರಕಿದೆ, ಆ ಪಟ್ಟಿಯಲ್ಲಿ ನಾನೊಬ್ಬನೇ ಉಳಿದುಕೊಂಡಿರುವೆ. ಈ ಬಾರಿ ಸಚಿವ ಸ್ಥಾನ ದೊರಕುವ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಹಿರಿಯ ಸಚಿವರನ್ನು ಪಕ್ಷದ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿ ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡುವ ಸಾಧ್ಯತೆ ಇದೆ. ಆದರೆ ಎಲ್ಲವೂ ಹೈಕಮಾಂಡ್ಗೆ ಬಿಟ್ಟ ವಿಷಯ. ನಾನು ಸಚಿವ ಸ್ಥಾನಕ್ಕಾಗಿ ಸಾತ್ವಿಕ ಮನೋಭಾವದಿಂದ ಒತ್ತಾಯಿಸುತ್ತಿರುವೆ ಅಷ್ಟೇ. ಆದರೆ ಇದು ನನ್ನ ಹಕ್ಕೊತ್ತಾಯವಂತೂ ಅಲ್ಲ ಎಂದರು.
ಇನ್ನು ನವೆಂಬರ್ ಕ್ರಾಂತಿ ವಿಷಯವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಪ್ರಶ್ನೆಯೇ ನನಗೆ ಕೇಳಿಸಲಿಲ್ಲ ಎಂದು ನಗುತ್ತಲೇ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡದೇ ಜಾರಿಕೊಂಡರು.
ಮತಗಳ್ಳತನ ವ್ಯಾಪಕವಾಗಿ ನಡೆದಿದೆ. ಈ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಮನ ಸೆಳೆದರೂ ಚುನಾವಣಾ ಆಯೋಗ ತನಿಖೆ ನಡೆಸುತ್ತಿಲ್ಲ. ಇದು ಚುನಾವಣಾ ಆಯೋಗವೋ ಅಥವಾ ಬಿಜೆಪಿ ಆಯೋಗವೋ ಎಂಬ ಸಂಶಯ ಕಾಡುತ್ತಿದೆ.
ಜಗತ್ತಿನಲ್ಲಿ ಸುಳ್ಳು ಹೇಳುವುದರಲ್ಲಿ ಮೋದಿ ಅವರಿಗೆ ಆಸ್ಕರ್ ಪ್ರಶಸ್ತಿ ಸಿಗಬೇಕು. ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಜನ ವಿರೋಧಿ ನೀತಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಬಗ್ಗೆ ಟೀಕೆ ಮಾಡಲು ಬಿಜೆಪಿಯವರಿಗೆ ನೈತಿಕ ಹಕ್ಕೇ ಇಲ್ಲ. ಮಹಾದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಅನುದಾನ ಹಾಗೂ ಯೋಜನೆಗಳನ್ನು ತರುವಲ್ಲಿ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರ ವಿಫಲವಾಗಿದ್ದಾರೆ ಎಂದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದರೆ ಸರಿ ಮಾಡಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.