
ಹೊರ್ತಿ: ವಿಜಯಪುರ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ–52 ಪಕ್ಕದಲ್ಲಿರುವ ಹೊರ್ತಿಯ ರೇವಣಸಿದ್ದೇಶ್ವರ ಜಾತ್ರೋತ್ಸವದಲ್ಲಿ ಜಾನುವಾರುಗಳ ಜಾತ್ರೆ ಗಮನ ಸೆಳೆಯುತ್ತಿದೆ. ಹಿಂಗಾರು ಹಂಗಾಮು ಬಳಿಕ ಉತ್ತರ ಕರ್ನಾಟಕದಲ್ಲಿ ನಡೆಯುವ ಪ್ರಥಮ ಜಾತ್ರೆ ಇದಾಗಿದೆ ಎಂಬುದು ವಿಶೇಷ.
ಜಾತ್ರೆಯಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಜಾನುವಾರು ಭಾಗಿಯಾಗಿವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಜಾನುವಾರು ಖರೀದಿದಾರರು, ಮಾರಾಟದಾರ ರೈತರು ಆಗಮಿಸಿದ್ದಾರೆ. ಒಂದು ವಾರದಿಂದ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಇದುವರೆಗೂ ಸುಮಾರು ಮೂರು ಸಾವಿರವರೆಗೆ ಜಾನುವಾರು ಖರೀದಿ–ಮಾರಾಟವಾಗಿವೆ.
ಈ ಬಾರಿ ಅತೀಯಾದ ಮಳೆಯಿಂದಾಗಿ ರೈತರ ಬೆಳೆಗಳೆಲ್ಲಾ ಸರ್ವನಾಶವಾಗಿವೆ. ಸಾಲ ಮಾಡಿರುವ ರೈತರು ಜಾನುವಾರು ಮಾರಾಟಕ್ಕೆ ಮುಂದಾಗಿದ್ದಾರೆ. ಆಧುನಿಕತೆಯ ಕೃಷಿಯಿಂದ ಜಾನುವಾರಗಳು ಕಡಮೆಯಾಗಿವೆ. ಈ ಹಿಂದೆ ನಡೆದ ಜಾತ್ರೆಗಳಲ್ಲಿ ಸೇರುತ್ತಿದ್ದ ಜಾನುವಾರು ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಸಂಖ್ಯೆಯಲ್ಲಿವೆ ಎಂಬುದು ರೈತರ ಅನಿಸಿಕೆ.
ಆದರೆ ದನಗಳಿಗೆ ಭಾರಿ ಬೇಡಿಕೆಯಿದ್ದು, ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿವೆ. ‘ಬದಕ ಸಾಕುವ ರೈತನಿಗೆ ಲಾಭ ಜತೆ ಖುಷಿ ತಂದಿದೆ. ಸಾಧಾರಣ ಜೋಡಿಯ ಎತ್ತುಗಳಿಗೆ ₹60ಸಾವಿರ ಇದ್ದರೇ , ₹1 ಲಕ್ಷವರೆಗೆ ಉತ್ತಮ ಜೋಡಿಯ ಸುಂದರವಾದ ಹೋರಿಗಳು ಮಾರಾಟವಾಗಿವೆ. ₹1ಲಕ್ಷದಿಂದ ₹2 ಲಕ್ಷದವರಗೆ ಉತ್ತಮ ತಳಿಯ ಜಾನುವಾರುಗಳು ಮಾರಾಟವಾದರೆ, ಒಂದು ಮೈಕಟ್ಟಿನ ಶುಭ್ರವಾದ ಸದೃಢ ಹೋರಿಯು ₹5 ಲಕ್ಷಕ್ಕೆ ಮಾರಾಟವಾಗಿದೆ’ ಎಂದು ಜಾತ್ರಾ ಕಮಿಟಿ ಕಾರ್ಯದರ್ಶಿ ಶಿವಲಿಂಗಪ್ಪ ಖೈನೂರು ಹೇಳಿದರು.
‘ಒಟ್ಟು ಈ ದನ-ಕರುಗಳ ಜಾತ್ರೆಯಲ್ಲಿ ಮೂರು ಸಾವಿರ ದನಗಳು ಮಾರಾಟವಾಗಿ ಸುಮಾರು ₹20 ಕೋಟಿಯಷ್ಟು ವಹಿವಾಟು ಆಗಿದೆ. ರೈತರು ಮಾರಿ ಚಿಂತೆ ದೂರು ಮಾಡಿಕೊಂಡಿದ್ದಾರೆ. ಜಾನುವಾರಗಳ ಜಾತ್ರೆಗೆ ಬೇಕಾಗುವ ವ್ಯವಸ್ಥೆ ನಾವು ಮಾಡಿದ್ದೇವೆ. ನಿರೀಕ್ಷೆಗೂ ಮೀರಿ ದನಗಳು ಬಂದಿವೆ. ಎಲ್ಲ ರೈತರಿಗೂ ಜಾತ್ರೆ ಲಾಭ ತಂದುಕೊಟ್ಟಿದೆ. ಪ್ರತಿವರ್ಷ ನಮ್ಮ ಜಾತ್ರೆಯಲ್ಲಿ ಜಾನುವಾರು ಮಾರಾಟವಾಗುವಲ್ಲಿ ಯಶಸ್ಸು ಪಡೆದು ಪ್ರಸಿದ್ದ ಜಾನುವಾರು ಜಾತ್ರೆಯಾಗಿ ಪ್ರತಿವರ್ಷ ದಾಪುಗಾಲು ಹಾಕುತ್ತ ಬರುತ್ತಿದೆ’ ಎಂದರು.
ಈ ಹೊರ್ತಿ ಜಾನುವಾರು ಜಾತ್ರೆಯಲ್ಲಿ ದನಕರು ಸದೃಢತೆಗೆ ತಕ್ಕಂತೆ ಯೋಗ್ಯ ಬೆಲೆಗೆ ಮಾರಾಟವಾಗಿವೆ. ಅಲ್ಲದೇ ಮೊದಲಿಗಿಂತಲೂ ಈ ಸಲ ಉತ್ತಮ ಬೆಲೆಗೆ ಮಾರಾಟವಾಗಿವೆ–ಮಲ್ಲಿಕಾರ್ಜುನ ಬಗಲಿ, ಜಿಗಜೀವಣಿ ಗ್ರಾಮದ ರೈತ
ಈ ಸಲ ಜಾನುವಾರುಗಳ ಜಾತ್ರೆಯಲ್ಲಿ ದನಗಳು ಹೆಚ್ಚಿನ ದರದಲ್ಲಿ ಮಾರಾಟವಾಗಿ ನಮಗೆ ಲಾಭ ತಂದಿದೆ. ಸ್ವಲ್ಪ ಸಮಾಧಾನವಾಗಿದೆ. ಅತಿ ಮೆಳೆಯಿಂದ ಬೆಳೆ ಇಲ್ಲದೆ ಚಿಂತೆಯಲ್ಲಿ ಇದ್ದಾಗ ದನ ಮಾರಾಟ ಖುಷಿ ತಂದಿದೆ–ಶಿವನಿಂಗಪ್ಪ ಬಿರಾದಾರ, ಮೀರಗಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.