ADVERTISEMENT

ಚಡಚಣ | ನೌಕರರ ಹಿತಕಾಯಲು ಸಂಘಟನೆ  ಬದ್ಧ: ಬಸವರಾಜ ಮಜ್ಜಗಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 2:48 IST
Last Updated 18 ಜನವರಿ 2026, 2:48 IST
ಚಡಚಣದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಜ್ಜಗಿ ಮಾತನಾಡಿದರು
ಚಡಚಣದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಜ್ಜಗಿ ಮಾತನಾಡಿದರು   

ಚಡಚಣ: ‘ಸರ್ಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಗಲಿರುಳು ಶ್ರಮಿಸುವ ಸರಕಾರಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರಿ ನೌಕರರ ಸಂಘಟನೆ ಬದ್ಧವಾಗಿದೆ’ ಎಂದು ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ನೇತೃತ್ವದಲ್ಲಿ 2024ರಲ್ಲಿ 7ನೇ ವೇತನ ಆಯೋಗ ಜಾರಿ, ಸರ್ಕಾರಿ ನೌಕರರ ಜೀವ ವಿಮಾ ಗಣಕೀಕರಣ, ಕ್ಯಾನ್ಸರ್ ಅಂತಹ ಗಂಭಿರ ಕಾಯಿಲೆಗಳಿಗೆ 6 ತಿಂಗಳ ವೇತನ ಸಹಿತ ರಜೆ, 1 ಲಕ್ಷ 35 ಸಾವಿರ ಮಹಿಳಾ ನೌಕರರಿಗೆ ಮಕ್ಕಳ ಆರೈಕೆಗಾಗಿ 6 ತಿಂಗಳು ವೇತನ ಸಹಿತ ರಜೆ, ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ಋತುಚಕ್ರ ರಜೆ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹೀಗೆ ಅನೇಕ ಕಾರ್ಯ ಮಾಡಿದೆ. ಷಡಕ್ಷರಿ ನೇತೃತ್ವದಲ್ಲಿ ಎನ್‌ಪಿಎಸ್ ತೊಲಗಿಸಿ ಒಪಿಎಸ್ ಜಾರಿಗೆ ಸಂಘ ನಿರಂತರ ಪ್ರಯತ್ನ ಮಾಡುತ್ತಿದೆ, ಅಗತ್ಯ ಬಿದ್ದರೆ ಹೋರಾಟ ಮಾಡಲು ಸಿದ್ಧವಾಗಿದೆ’ ಎಂದರು.

ADVERTISEMENT

ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ನೌಕರರ ಸಂಘ ನೌಕರರ ಆರೋಗ್ಯ ಕಾಪಾಡುವುದರ ಜೊತೆಗೆ ಜನಸೇವೆ ಮಾಡುವ ಶ್ರೇಷ್ಠ ಕಾರ್ಯ ಮಾಡಿ ರಾಜ್ಯಕ್ಕೆ ಮಾದರಿ ಆಗಿದೆ. ಶೀಘ್ರದಲ್ಲಿ ನೌಕರರ ಭವನ ನಿರ್ಮಾಣಕ್ಕೆ ಪಟ್ಟಣದಲ್ಲಿ ನಿವೇಶನ ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ‘ಪ್ರಾಥಮಿಕ ಶಾಲಾ ಶಿಕ್ಷಕರ ಟಿಇಟಿ ಪರೀಕ್ಷೆ ರದ್ದು ಪಡಿಸಬೇಕು. ಬಿಎಲ್ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಅತ್ಯುತ್ತಮ ಸೇವೆ ಮಾಡಿದ ಸರ್ಕಾರಿ ನೌಕರರಿಗೆ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಂತರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ, ಪಟ್ಟಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೆ ತಾವಸೆ, ವೈದ್ಯಾಧಿಕಾರಿ ಅಗರಖೇಡ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ಸೋನಗಿ, ಕಾರ್ಯದರ್ಶಿ ಬಸವಂತ ಉಮ್ರಾಣಿ, ನೌಕರರ ಸಂಘದ ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಖಜಾಂಚಿ ವಿಠ್ಠಲ ಕೋಳಿ, ಉಪಾಧ್ಯಕ್ಷರಾದ ಮುಕುಂದ ಅಡಕೆ, ಸಿದ್ದು ಬಾಲಗಾಂವ, ಸಲೀಮ್ ಮಕಾನದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಗೌರವಾಧ್ಯಕ್ಷ ಸುರೇಶ ಮಾವಿನಮರ, ಉಪಾಧ್ಯಕ್ಷ ಎಸ್.ಬಿ ಪಾಟೀಲ, ಪ್ರಾಥಮಿಕ ಶಾಲಾ ಪತ್ತಿನ ಉಪಾಧ್ಯಕ್ಷ ಎಸ್.ಜೆ ಪಾಟೀಲ ಹಾಗೂ ತಾಲ್ಲೂಕಿನ ನೌಕರರ ಸಂಘದ ವಿವಿಧ ಹಂತದ ಪದಾಧಿಕಾರಿಗಳು ಇದ್ದರು.

ಶಿಕ್ಷಕ ಗುರು ಜೇವೂರ, ಪ್ರಶಾಂತ್ ಕುರ್ಲೆ, ಶಿಕ್ಷಕ ಸತೀಶ ಬಗಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.