ವಿಜಯಪುರ: ‘ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ. ನಮ್ಮ ದೇಶ ಒಡೆದು ಮುಸ್ಲಿಮರಿಗೆ ಪಾಕಿಸ್ತಾನವನ್ನು ಮಾಡಿಕೊಟ್ಟ’ ಎಂದು ಹೇಳಿಕೆ ನೀಡಿದ್ದ ಆರೋಪದ ಮೇಲೆ ವಿಜಯಪುರ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಎಂಬುವರು ಇಲ್ಲಿನ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅವರ ಮಾನಹರಣ ಮಾಡಿ, ದೇಶದಲ್ಲಿ ಅಶಾಂತಿ ಹುಟ್ಟಿಸುವ ಪಿತೂರಿ ನಡೆಸಿದ ಯತ್ನಾಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಮಹಾತ್ಮ ಗಾಂಧಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆ ನೀಡಿ ಶಾಸಕ ಬಸನಗೌಡ ಯತ್ನಾಳ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರಮಠ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.