ವಿಜಯಪುರ: ‘ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರದ ಆಸೆಗಾಗಿ, ಯಾವುದೇ ಪೂರ್ವ ತಯಾರಿಯಿಲ್ಲದೆ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿ, ಸದ್ಯ ರಾಜ್ಯವನ್ನು ಸಾಲಗಾರ ಮಾಡಲು ಹೊರಟಿದೆ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಐದು ಉಚಿತ ಗ್ಯಾರೆಂಟಿಗಳನ್ನು ನೀಡಿ ಅಧಿಕಾರ ಪಡೆದುಕೊಂಡಿದೆ. ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಬಜೆಟ್‌ನಲ್ಲಿ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಬದಲಿಗೆ ರಾಜ್ಯ ಸರ್ಕಾರ ₹85 ಸಾವಿರ ಕೋಟಿ ಸಾಲ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಸರ್ಕಾರ ರಾಜ್ಯವನ್ನು ಸಾಲಗಾರನಾಗಿ ಮಾಡುತ್ತಿರುವುದು ಮಾತ್ರವಲ್ಲದೆ, ಅಭಿವೃದ್ಧಿ ಕೆಲಸಗಳಿಗೆ, ಮೂಲಭೂತ ಸೌಕರ್ಯಗಳಿಗಾಗಿ ಮೀಸಲಿಡಲಾಗಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ಎಲ್ಲರನ್ನು ಒಂದೇ ಕಣ್ಣಿಂದ ನೋಡಬೇಕಿರುವ ಸರ್ಕಾರ ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುತ್ತಿದೆ. ಲೋಡ್‌ಶೆಡ್ಡಿಂಗ್ ಹೆಸರಿನಲ್ಲಿ ರಾಜ್ಯದ ರೈತರ ವಿದ್ಯುತ್ ಕಿತ್ತುಕೊಂಡು, 200 ಯುನಿಟ್ ವಿದ್ಯುತ್ ಉಚಿತ ನೀಡುತ್ತಿದೆ’ ಎಂದು ಆರೋಪಿಸಿದರು.
‘72 ಸಾವಿರ ಕೋಟಿ ಬಜೆಟ್ ಹೊಂದಿರುವ ದೆಹಲಿಯ ಕೇಜ್ರಿವಾಲ್ ಸರ್ಕಾರ 200 ಯುನಿಟ್ ಉಚಿತ ವಿದ್ಯುತ್, 20 ಸಾವಿರ ಲೀಟರ್ ನೀರು, ವಿದ್ಯಾರ್ಥಿಗಳಿಗೆ ಉಚಿತ ಹೈಟೆಕ್ ವಿದ್ಯಾಭ್ಯಾಸ, ಹೈಟೆಕ್ ಆಸ್ಪತ್ರೆಗಳ ನಿರ್ಮಾಣ ಹಾಗೂ ಚಿಕಿತ್ಸೆ, ಮಹಿಳೆಯರಿಗೆ ಉಚಿತ ಪ್ರಯಾಣಗಳನ್ನು ನೀಡಿದೆ. ಸದ್ಯ ಮತ್ತೇ ಹೆಚ್ಚುವರಿಯಾಗಿ 7 ಸಾವಿರ ಕೋಟಿ ಬಜೆಟ್ ಘೋಷಣೆ ಮಾಡಿದೆ’ ಎಂದರು.
‘ಈವರೆಗೆ ಯಾವುದೇ ಸರ್ಕಾರ ಹೆಚ್ಚುವರಿ ಬಜೆಟ್ ನೀಡಿಲ್ಲ, ಹೆಚ್ಚುವರಿ ಬಜೆಟ್ ಯಾವುದಾದರೂ ಸರ್ಕಾರ ನೀಡಿದ್ದರೆ ಅದು ದೆಹಲಿ ಸರ್ಕಾರ ಮಾತ್ರ. ರಾಜ್ಯದ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು, ಭ್ರಷ್ಟ ರಹಿತ ಆಡಳಿತ ನೀಡಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ರಾಜ್ಯದಲ್ಲಿ ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಬಲಿಷ್ಠ ಭಾರತ ನಿರ್ಮಿಸಲು ಸಾಧ್ಯ’ ಎಂದರು.
‘ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾ ಹೊರಟಿದೆ, ಆದರೆ ರಾಜ್ಯದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಹಣವನ್ನು ಗ್ಯಾರೆಂಟಿಗಳಿಗೆ ನೀಡಿ, ರಾಜ್ಯದ ಅಭಿವೃದ್ಧಿಗೆ ದುಡ್ಡಿಲ್ಲ, ಡ್ಯಾಂಗಳಿಗೆ, ಕಾವೇರಿ, ಕೃಷ್ಣ, ಗೋದಾವರಿ ಅಭಿವೃದ್ದಿಗೆ, ಗಡಿ ಅಭಿವೃದ್ಧಿ, ಕನ್ನಡ ಅಭಿವೃದ್ಧಿಗೆ ದುಡ್ಡಿಲ್ಲ, 13 ಅಕಾಡೆಮಿಗಳಲ್ಲಿ ಚೆರಮನ್‌ಗಳನ್ನು ನೇಮಕ ಮಾಡಿಲ್ಲ. ಪ್ರಾಧಿಕಾರಗಳ ಸ್ಥಿತಿ ಕೂಡ ಶೋಚನೀಯವಾಗಿದೆ. ಕಲಾವಿದರಿಗೆ ಅನುದಾನವನ್ನು ನೀಡಿಲ್ಲ. ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಪ್ರಚಾರ ಮಾಡಲಾಗುತ್ತದೆ. ಆದರೆ ಸಲ್ಲಬೇಕಾದ ಫಲಾನುಭವಿಗಳಿಗೆ ಸೌಲಭ್ಯ ನಿಲ್ಲುತ್ತಿಲ್ಲ’ ಎಂದರು.
ಪಕ್ಷದ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಅರ್ಜುನ ಹುಲಗಿಗೌಡರ, ರೋಹನ್ ಐನಾಪುರ, ಜಗದೀಶ ಸದಮ್, ಭೋಗೇಶ ಸೋಲಾಪೂರ, ಸಂಜು ಶಟಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.