ADVERTISEMENT

ವಿಜಯಪುರದಲ್ಲಿ ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 12:53 IST
Last Updated 18 ಡಿಸೆಂಬರ್ 2025, 12:53 IST
   

ವಿಜಯಪುರ: ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣವನ್ನು ದೆಹಲಿ ಕೋರ್ಟ್‌ ವಜಾಗೊಳಿಸಿ, ಇದೊಂದು ಪಿತೂರಿ, ದ್ವೇಷ ರಾಜಕಾರಣದ ಪ್ರಕರಣ ಎಂದು ಸಾಬೀತು ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಗೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದರು. 

ನಗರದ ಗೋದಾವರಿ ಹೋಟೆಲ್‌ ಸಮೀಪದ ಡಾ. ಬಾಬು ಜಗಜೀವನರಾಂ ವೃತ್ತದಿಂದ ಬಿ.ಜೆ.ಪಿ. ಜಿಲ್ಲಾ ಕಚೇರಿಗೆ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಬಿಜೆಪಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು.

ಮಾರ್ಗ ಮಧ್ಯೆ ಪೊಲೀಸರು ಬ್ಯಾರಿಕೇಡ್‌ ಹಾಕಿ, ಪ್ರತಿಭಟನಾಕಾರರನ್ನು ತಡೆದರು. ಬಳಿಕ ಕಾಂಗ್ರೆಸ್‌ ಮುಖಂಡರನ್ನು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದು ಬಿಡುಗಡೆ ಮಾಡಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ರಾಷ್ಟ್ರೀಯಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ  ನಾಯಕರ ವಿರುದ್ಧ ದುರುದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿದೆ. ದೆಹಲಿ ಕೋರ್ಟ್‌ ಈ ಪ್ರಕರಣವನ್ನು ವಜಾಗೊಳಿಸಿದೆ. ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಬಿ.ಜೆ.ಪಿ.ಯು ನಡೆಸುತ್ತಿರುವ ಪ್ರತೀಕಾರ ರಾಜಕಾರಣ ಹಾಗೂ ತನಿಖಾ ಸಂಸ್ಥೆಗಳ ದುರುಪಯೋಗವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.

ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಡೆಸಿರುವ ಪಿತೂರು ಕೋರ್ಟ್‌ ತನಿಖೆಯಿಂದ ಬಹಿರಂಗವಾಗಿದೆ ಎಂದು ಹೇಳಿದರು.

ಕೆ.ಪಿ.ಸಿ.ಸಿ ಸದಸ್ಯ ಅಬ್ದುಲ್‌ ಹಮೀದ ಮುಶ್ರೀಫ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಹ್ಮದ್‌ ರಫೀಕ ಟಪಾಲ, ಸೋಮನಾಥ ಕಳ್ಳಿಮನಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗಂಗಾಧರ ಸಂಬಣ್ಣಿ, ದಿನೇಶ ಹಳ್ಳಿ, ಕನ್ನಾನ ಮುಶ್ರೀಫ್‌, ಉಸ್ಮಾನ್‌ ಪಟೇಲ, ಜಕ್ಕಪ್ಪ ಯಡವೆ, ಆಸೀಫ್‌ ಶಾನವಾಲೆ,  ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಮಹಾದೇವಿ ಗೋಕಾಕ, ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ಜಮೀರ ಅಹ್ಮದ ಬಕ್ಷಿ, ಆರತಿ ಶಾಹಪೂರ, ರಫೀಕ ಪಕಾಳೆ, ಗುರುನಾಥ ತಾರನಾಳ, ಬಿ. ಸಿ. ಸಾಹುಕಾರ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ರಮೀಜಾ ನದಾಫ,   ರಮೇಶ ಗುಬ್ಬೇವಾಡ, ಶಕೀಲ ಬಾಗಮಾರೆ,  ಫಯಾಜ ಕಲಾದಗಿ,  ಮಹಾದೇವ ರಾಠೋಡ,  ಭಾರತಿ ನಾವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.