
ವಿಜಯಪುರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ನಮ್ಮ ಸರ್ಕಾರದ ಸಾಧನೆಗಳನ್ನು ಜನರ ಮನೆ ಮನೆಗೆ ತಲುಪಿಸುವ ಮೂಲಕ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.
ನಗರದ ಸ್ಟಾರ್ ಸಭಾಂಗಣದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮೀಜಾ ನದಾಫ್ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗೃಹಕ್ಷ್ಮಿ ಯೋಜನೆಯ ಹಣವನ್ನು ಅನೇಕ ಮಹಿಳೆಯರು ಬಂಗಾರ ತೆಗೆದುಕೊಳ್ಳಲು, ಗ್ರಂಥಗಳನ್ನು ಖರೀದಿಸಲು ಮೊದಲಾದ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ, ಮಹಿಳೆಯರಿಗೆ ಆರ್ಥಿಕ ಸಬಲೀಕರಣದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಧಾನ ಪಾತ್ರ ವಹಿಸಿದೆ ಎಂದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ ಮಾತನಾಡಿ, ಇಂದು ಮಹಿಳೆ ಹಿಂದೆಂದಿಗಿಂತಲೂ ದೊಡ್ಡ ಸವಾಲು ಎದುರಿಸುತ್ತಿದ್ದಾಳೆ, ಪ್ರತಿ ನಿಮಿಷಕ್ಕೆ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ, ಈ ಕಾಲಘಟ್ಟದಲ್ಲಿ ಮಹಿಳೆ ರಾಜಕೀಯವಾಗಿಯೂ ಪ್ರಬಲಗೊಳ್ಳಬೇಕು, ಇಂದಿಗೂ ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ, ಮಹಿಳೆಗೆ ಈ ಪ್ರಾತಿನಿಧ್ಯ ದೊರಕಿದಾಗ ಮಾತ್ರ ಮಹಿಳಾ ಸಮಸ್ಯೆಗಳಿಗೆ ಕಡಿವಾಣ ಬೀಳಲು ಸಾಧ್ಯ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ನೂತನ ಜಿಲ್ಲಾ ಘಟಕದ ಅಧ್ಯಕ್ಷೆ ರಮೀಜಾ ನದಾಫ್ ಮಾತನಾಡಿದರು.
ಎಐಸಿಸಿಸಿ ಮಾಜಿ ಸದಸ್ಯೆ ಶ್ರೀದೇವಿ ಉತ್ಲಾಸರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಮಹಾದೇವಿ ಗೋಕಾಕ, ರುಕ್ಮೀಣಿ ಚವ್ಹಾಣ, ಭಾರತಿ ನಾವಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಗಡಿನಾಡು ಅಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಬಿ.ಆರ್. ಪಾಟೀಲ ಯಾಳಗಿ ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ ಈ ಎಲ್ಲ ಜನಪರ ಕಾರ್ಯಗಳನ್ನು ಮಹಿಳಾ ಕಾರ್ಯಕರ್ತೆಯರು ಜನರ ಮನೆ ಮನೆಗೆ ತಿಳಿಸುವ ಕಾರ್ಯ ಮಾಡಬೇಕು.– ಸೌಮ್ಯಾ ರೆಡ್ಡಿ, ಅಧ್ಯಕ್ಷೆ ಕೆಪಿಸಿಸಿ ಮಹಿಳಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.