ADVERTISEMENT

ಕೋವಿಡ್ ಪರೀಕ್ಷೆ; ಮನೆ, ಮನೆ ಭೇಟಿಗೆ ಸೂಚನೆ

ಗುಣಕಿ ಗ್ರಾಮ ಪಂಚಾಯ್ತಿ ಕೋವಿಡ್ ಕಾರ್ಯಪಡೆ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 13:15 IST
Last Updated 20 ಮೇ 2021, 13:15 IST
ವಿಜಯಪುರ ತಾಲ್ಲೂಕಿನ ಗುಣಕಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಗುರುವಾರ ಕೋವಿಡ್‌ ಕಾರ್ಯಪಡೆ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸಭೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದರೆಡ್ಡಿ ಇದ್ದರು
ವಿಜಯಪುರ ತಾಲ್ಲೂಕಿನ ಗುಣಕಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಗುರುವಾರ ಕೋವಿಡ್‌ ಕಾರ್ಯಪಡೆ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸಭೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದರೆಡ್ಡಿ ಇದ್ದರು   

ವಿಜಯಪುರ: ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಅನುಕೂಲವಾಗುವಂತೆ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಬೇಕು, ಕೋವಿಡ್ ಲಕ್ಷಣ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚಿಸಿದರು.

ತಾಲ್ಲೂಕಿನ ಗುಣಕಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಗುರುವಾರ ಕೋವಿಡ್‌ ಕಾರ್ಯಪಡೆ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವಂತಹ ಪ್ರತಿ ಮನೆಗೆ ತೆರಳಿ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಸೇರಿದಂತೆ ಬೇರೆಬೇರೆ ಅಪಾಯಕಾರಿ ಕಾಯಿಲೆ ಇದ್ದವರನ್ನು ಆದ್ಯತೆ ಮೇಲೆ ತಕ್ಷಣ ಚಿಕಿತ್ಸೆಗೆ ಒಳಪಡಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ರೋಗ ಲಕ್ಷಣ ಉಳ್ಳವರ ಬಗ್ಗೆ ನಿಗಾ ಇಡಬೇಕು. ರೋಗ ಲಕ್ಷಣ ಕಂಡು ಬಂದ ತಕ್ಷಣ 7 ದಿನಗಳ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಪ್ರಾಣಾಪಾಯದಿಂದ ಉಳಿಯಲು ಸಾಧ್ಯವಿದ್ದು. ಉಸಿರಾಟ ತೊಂದರೆ ಹಾಗೂ ಕೋವಿಡ್ ರೋಗ ಲಕ್ಷಣಗಳು ಕಂಡುಬಂದ ತಕ್ಷಣ ಜನರು ಕೂಡ ಸ್ವಯಂಪ್ರೇರಿತವಾಗಿ ಚಿಕಿತ್ಸೆಗೆ ಒಳಪಡುವಂತೆ ಅವರು ಸಲಹೆ ನೀಡಿದರು.

ADVERTISEMENT

ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ಉಸಿರಾಟದ ತೊಂದರೆಯಾಗಲಿದ್ದು, ಇಂತಹ ಸಮಸ್ಯೆ ಇದ್ದವರು ತಕ್ಷಣ ಚಿಕಿತ್ಸೆಗೆ ಒಳಪಡುವ ಬಗ್ಗೆ ಕಾರ್ಯಪಡೆ ಅವರು ಮನವರಿಕೆ ಮಾಡಬೇಕು ಎಂದರು.

ಕೋವಿಡ್ ನಿಯಂತ್ರಣಕ್ಕಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರನ್ನು ಕೂಡ ಕಾರ್ಯಪಡೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಸಾರ್ವಜನಿಕರಲ್ಲಿ ಕೋವಿಡ್‌ ಬಗ್ಗೆ ಪರಿಣಾಮಕಾರಿ ಅರಿವು ಮೂಡಿಸಲು ಸೂಚನೆ ನೀಡಿದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ಶೇ25 ರಷ್ಟು ಕೋವಿಡ್‌ ಪ್ರಕರಣಗಳು ಕಂಡು ಬರುತ್ತಿದ್ದು, ಶೇ 75 ರಷ್ಟು ಪ್ರಕರಣಗಳು ಗ್ರಾಮಾಂತರ ಪ್ರದೇಶಗಳಿಂದ ಬರುತ್ತಿವೆ. ಕಾರಣ ಗ್ರಾಮಾಂತರ ಪ್ರದೇಶದ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ರೋಗಿಗಳ ಪ್ರಮಾಣ ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಕೋವಿಡ್ ಮುಕ್ತಗೊಳಿಸಿದ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಅವರಿಗೆ ಬಹುಮಾನ ನೀಡುವ ಸದುದ್ದೇಶ ಹೊಂದಲಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಮುಕ್ತ ಹಳ್ಳಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.

ನೋಂದಾಯಿತವಲ್ಲದ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುತ್ತಿದ್ದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಕೋವಿಡ್ ರೋಗಿಗಳ ಪತ್ತೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜೊತೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಕಾರ್ಯಪಡೆಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ರಾಥೋಡ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಶ್ರೀ ವಿನೋದ್ ರಾಠೋಡ್, ಪಿಡಿಒ ಎಸ್.ಐ. ಗದಗಿಮಠ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

***

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ರೋಗ ತೀವ್ರವಾಗಿ ಹರಡುತ್ತಿದ್ದು, ಈ ಕುರಿತು ಕೋವಿಡ್‌ ಕಾರ್ಯ ಪಡೆಗಳು ಗಂಭೀರವಾಗಿ ಪರಿಗಣಿಸಿ ಕೋವಿಡ್ ಲಕ್ಷಣ ಉಳ್ಳವರನ್ನು ತಕ್ಷಣ ಪತ್ತೆ ಹಚ್ಚುವ ಕಾರ್ಯ ಮಾಡಬೇಕು

–ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.