ADVERTISEMENT

ಗೆದ್ದು ಬಂದವರು | ಕೊರೊನಾ ವಾಸಿಗೆ ಧೈರ್ಯವೇ ಮದ್ದು

ಕೆ.ಎಸ್.ಈಸರಗೊಂಡ
Published 11 ಆಗಸ್ಟ್ 2020, 11:05 IST
Last Updated 11 ಆಗಸ್ಟ್ 2020, 11:05 IST
ವಾಮನ ಕುಲಕರ್ಣಿ 
ವಾಮನ ಕುಲಕರ್ಣಿ    

ಹೊರ್ತಿ: ‘ನನಗೆ ಕೊರೊನಾ ಲಕ್ಷಣಗಳು ಇರಲಿಲ್ಲ. ಆದರೂ ಗಂಟಲು ದ್ರವ ಪರೀಕ್ಷೆಗೆ ಒಳಗಾದಾಗ ಪಾಸಿಟಿವ್ ಬಂದಿದೆ ಎಂಬುದು ಗೊತ್ತಾಯಿತು. ಕೋವಿಡ್‌ ಬಂದಿದೆ ಎಂಬ ವಿಷಯ ತಿಳಿದು ನಾನು ಗಾಬರಿಯಾದೆ. ನನಗೆ ಹೇಗೆ ಬಂತು ಎಂಬ ಚಿಂತೆಯಲ್ಲಿ ಮುಳುಗಿದೆ’ ಎಂದುಹೊರ್ತಿಯ ಬ್ರಾಹ್ಮಣ ಗಲ್ಲಿಯ ನಿವಾಸಿ ವಾಮನ ಹಣಮಂತರಾವ್ ಕುಲಕರ್ಣಿ ಹೇಳಿದರು.

‘ನನಗೆ ಕೋವಿಡ್‌ ದೃಢವಾಗಿದ್ದು ತಿಳಿದಾಗ ಮನೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಾನು ಗುಣಮುಖನಾಗಿ ಬರುತ್ತೇನೆ, ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಧೈರ್ಯ ತುಂಬಿ ಇಂಡಿಯ ಕೋವಿಡ್‌ ಕೇರ್‌ ಸೆಂಟರ್‌ಗೆ ತೆರಳಿದ್ದೆ’ ಎಂದರು.

‘ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಉತ್ತಮ ಚಿಕಿತ್ಸೆ ದೊರೆಯಿತು. ಇದೇನು ದೊಡ್ಡ ರೋಗವಲ್ಲ. ಸಾವಿರಾರು ಜನರಿಗೆ ಬಂದಿದೆ. ವಾಸಿಯಾಗಿದ್ದಾರೆ ಎಂಬ ಧೈರ್ಯವನ್ನು ಮನದಲ್ಲಿ ಮಾಡಿದೆ. ವೈದ್ಯರು ನೀಡಿದ ಔಷಧ ತೆಗೆದುಕೊಂಡ ಪರಿಣಾಮ ಈ ರೋಗದಿಂದ ಸಂಪೂರ್ಣವಾಗಿ ಗುಣಮುಖನಾಗಲೂ ಸಾಧ್ಯವಾಯಿತು’ ಎಂದರು.

ADVERTISEMENT

‘ಸದ್ಯ ಕೋವಿಡ್‌ನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಚನ್ನಾಗಿದ್ದೇನೆ. ಈಗ ನಾನು ಮತ್ತೇ ವಿಜಯಪುರ ಜೆಒಸಿಸಿ ಬ್ಯಾಂಕ್ ನಲ್ಲಿ ನೌಕರಿಗೆ ಹೋಗುತ್ತಿದ್ದೇನೆ’ ಎಂದು ತಿಳಿಸಿದರು.

‘ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಸೇರಿ ಎಂಟು ಜನ ಸದಸ್ಯರು ಇದ್ದು, ಅವರಾರಿಗೂ ಸಮಸ್ಯೆಯಾಗಲಿಲ್ಲ. ಎಲ್ಲರೂ ಆರೋಗ್ಯವಾದ್ದಾರೆ’ ಎಂದರು.

‘ಸ್ಯಾನಿಟೈಸರ್, ಮಾಸ್ಕ್, ಅಂತರ ಕಾಯ್ದುಕೊಂಡರೆ ಕೊರೊನಾ ಸೋಂಕು ಸಮೀಪಕ್ಕೆ ಬಾರದು’ ಎಂದು ಹೇಳಿದರು.

‘ಕೋವಿಡ್‌ ಬಂದವರು ಭಯ ಪಡದೇ ಆತ್ಮ ವಿಶ್ವಾಸದಿಂದ ಇರಬೇಕು. ಈ ರೋಗದ ಬಗ್ಗೆ ಜನತೆಯಲ್ಲಿ ಯಾವುದೇ ತರಹದ ಭಯದ ವಾತಾವರಣ ಸೃಷ್ಟಿಸಬಾರದು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.