
ವಿಜಯಪುರ ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ ಉದ್ದೇಶಿತ ಕೆಎಸ್‍ಡಿಎಲ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿ.ಎಸ್. ನಾಡಗೌಡ ಸ್ಥಳ ವೀಕ್ಷಣೆ ಮಾಡಿದರು
ವಿಜಯಪುರ: ‘ನಾನು ನಿಷ್ಠಾವಂತ ಕಾಂಗ್ರೆಸ್ಸಿಗ, 1981ರಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವೆ. ಯಾವ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಜೀವನದಲ್ಲಿರುವ ವ್ಯಕ್ತಿ. ಹೀಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ’ ಎಂದು ಕರ್ನಾಟಕ ಸಾಬೂನು– ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಸ್ಥಾನ ಅಪೇಕ್ಷೆ ಪಡುವುದರಲ್ಲಿ ತಪ್ಪಿಲ್ಲ. ಇದರಲ್ಲಿ ನೈತಿಕ ಹಕ್ಕಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಯಶವಂತರಾಯಗೌಡ ನನ್ನ ತಮ್ಮ, ಅವರಿಗೆ ಸಚಿವ ಸ್ಥಾನ ಸಿಕ್ಕರೂ ಸಂತೋಷಪಡುವೆ’ ಎಂದರು.
‘ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಬಂದರೆ ಬೇಡವೆನ್ನುವುದೇಕೆ? ನಾವೆಲ್ಲ ಒಟ್ಟಾಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಹೋಗೋಣ, ನಮ್ಮಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ ಎಂದು ಹೇಳಿ ಬರೋಣ’ ಎಂದು ಹೇಳಿದರು.
‘ಈ ಹಿಂದೆ ಅನೇಕ ಬಾರಿ ನನ್ನ ಹೆಸರು ಸಚಿವರ ಪಟ್ಟಿಯಲ್ಲಿತ್ತು, ನವದೆಹಲಿ ಮಟ್ಟದಲ್ಲೂ ಕ್ಲಿಯರ್ ಆಗಿತ್ತು. ಆದರೆ, ಆ ನಂತರ ಕೈ ತಪ್ಪಿತು. ಅದಕ್ಕೆ ಅಸಮಾಧಾನ ಹೊರಹಾಕಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.
‘ಲಿಂಗಾಯತ ಕೋಟಾ ಆಧರಿಸಿಯೇ ಅನೇಕರು ಮಂತ್ರಿಯಾಗಿದ್ದಾರೆ, ನಾನು ಮಂತ್ರಿಯಾಗಬೇಕು ಎಂಬುದು ಅಪೇಕ್ಷೆ. ಆದರೆ ಬೇರೆಯವರಿಗೆ ಸಚಿವ ಸ್ಥಾನ ಕೊಡಬೇಡಿ ಎಂದು ಹೇಳುವ ಜಾಯಮಾನ ನನ್ನದಲ್ಲ’ ಎಂದರು.
ಸ್ಥಳ ಪರಿಶೀಲನೆ: ‘ಮೈಸೂರು ಸ್ಯಾಂಡಲ್ ಸೋಪ್’ ಉತ್ಪಾದನಾ ಘಟಕ ಸ್ಥಾಪನೆಗೆ ಇಟ್ಟಂಗಿಹಾಳದಲ್ಲಿ ಉದ್ದೇಶಿತ 30 ಎಕರೆ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಬೇರೆ ಜಮೀನನ್ನು ಪರಿಶೀಲನೆ ಮಾಡಲಾಗಿದೆ. ಆದರೆ, ಅಲ್ಲಿ ನೆಡುತೋಪು ನಿರ್ಮಾಣ ಕಷ್ಟ ಸಾಧ್ಯ, ಉತ್ಪಾದನಾ ಘಟಕ ಮಾತ್ರ ನಿರ್ಮಾಣ ಸಾಧ್ಯ, ಈ ಎರಡು ವಿಷಯಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.
‘ವಿಜಯಪುರದಲ್ಲಿ ರೋಸ್, ಜಾಸ್ಮೀನ್ ಮೊದಲಾದ ಸೋಪು, ಡಿಟರ್ಜೆಂಟ್ ಪೌಡರ್ ಹಾಗೂ ಡಿಟೆರ್ಜೆಂಟ್‌ಗಳನ್ನು ಇಲ್ಲಿ ಉತ್ಪಾದಿಸುವ ಕಾರ್ಯಯೋಜನೆ ಇದೆ, ಪ್ರತಿ ಗಂಟೆಗೆ 2 ಟನ್ ಸಾಬೂನು ಉತ್ಪಾದಿಸುವ ಸಾಮರ್ಥ್ಯವುಳ್ಳ ಯಂತ್ರವನ್ನು ಇಲ್ಲಿ ಅಳವಡಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ’ ಎಂದರು.
‘ಉತ್ಪಾದನಾ ಘಟಕವನ್ನು ಪ್ರಥಮ ಬಾರಿಗೆ ವಿಜಯಪುರಕ್ಕೆ ತರುವ ಪ್ರಯತ್ನ ನಡೆದಿದೆ, 200 ಜನಕ್ಕೆ ನೇರ ಉದ್ಯೋಗ ಒದಗಿಸಲು ಸಾಧ್ಯವಾಗಲಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉದ್ಯೋಗ ಸೃಜನೆಯಾಗಲಿದೆ’ ಎಂದು ಭರವಸೆ ನೀಡಿದರು.
ಮುದ್ದೇಬಿಹಾಳ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆಯು ಹೈಕಮಾಂಡ್ ನಿರ್ಧಾರ. ಈ ವಿಷಯ ಮಾತನಾಡಲು ನಾವೆಲ್ಲ ಬಹಳ ಸಣ್ಣವರು’ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಗಮವಾಗಿ, ಸರಳವಾಗಿ ಸರ್ಕಾರ ನಡೆದಿದೆ. ಮಂತ್ರಿ ಮಂಡಲದ ಬದಲಾವಣೆ ಆಗುವುದು ಸಹಜ. ಕೆಲವರು ಬದಲಾಗುವ ಸಾಧ್ಯತೆ ಇದೆ’ ಎಂದರು.
‘ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಅವರಲ್ಲಿ ಯಾರಾದರೂ ಸಚಿವ ಸ್ಥಾನ ತ್ಯಾಗ ಮಾಡಿದರೆ ಆ ಸ್ಥಾನಕ್ಕೆ ಹಿರಿಯನಾದ ನನ್ನನ್ನು ಪರಿಗಣಿಸಬೇಕು ಎಂದು ಹೈಕಮಾಂಡ್‌ಗೆ ವಿನಂತಿಸಿದ್ದೇನೆ’ ಎಂದು ತಿಳಿಸಿದರು.
‘ಈ ಬಾರಿ ನನ್ನನ್ನು ಮಂತ್ರಿ ಮಾಡುವ ಆಶ್ವಾಸನೆ ಹೈಕಮಾಂಡ್‌ನಿಂದ ಸಿಕ್ಕಿದೆ. ಸಂಪುಟದಲ್ಲಿ ಇರುವ ವಿಶ್ವಾಸ ಇದೆ’ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಉದ್ಯಮಿ ಶರಣು ಸಜ್ಜನ, ರಾಜು ಗೌಡರ, ರಾಯನಗೌಡ ತಾತರೆಡ್ಡಿ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.