ADVERTISEMENT

ನಮ್ಮವರ ಮನಸ್ಸು ಖರ್ಗೆಗೆ ಅರ್ಥವಾಗುತ್ತದೆ: ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 12:42 IST
Last Updated 26 ನವೆಂಬರ್ 2025, 12:42 IST
   

ವಿಜಯಪುರ: ‘ದಲಿತರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ವಿಷಯವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ, ನಮ್ಮವರೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಿದ್ದಾರೆ, ಅವರಿಗೆ 50 ವರ್ಷ ಸುದೀರ್ಘ ರಾಜಕಾರಣದ ಅನುಭವವಿದೆ, ನಮ್ಮವರ (ದಲಿತ ಮುಖಂಡರು) ಮನಸ್ಸು ಅವರಿಗೆ ಅರ್ಥವಾಗುತ್ತದೆ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

‘ನಮ್ಮದು ಹೈಕಮಾಂಡ್ ಸಂಸ್ಕೃತಿ, ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್‌ ರಚನೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ, ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ, ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ, ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿದೆ’ ಎಂದರು.

ADVERTISEMENT

‘ಮುಂದಿನ ಐದು ವರ್ಷಗಳಲ್ಲಿ ಖಾಲಿ ಇರುವ 2.50 ಲಕ್ಷ  ಹುದ್ದೆ ಭರ್ತಿ ಮಾಡುತ್ತೇವೆ ಎಂದು  ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದೇವೆ. ಆ ಪ್ರಕಾರ ಭರ್ತಿ ಮಾಡುತ್ತೇವೆ, ಒಳ ಮೀಸಲಾತಿ ಅನುಷ್ಠಾನದ ಗೊಂದಲದಿಂದ ತಡವಾಗಿದೆ’ ಎಂದು ಹೇಳಿದರು.

‘15 ಸಾವಿರ ಪೊಲೀಸ್ ಕಾನ್‌ ಸ್ಟೇಬಲ್‌ ಹುದ್ದೆಗಳ ನೇಮಕಾತಿ ಹಂತ ಹಂತವಾಗಿ ಮಾಡುತ್ತೇವೆ, ಈಗಾಗಲೇ 4500 ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ, ಎರಡು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.