
ಆಲಮಟ್ಟಿ: ‘2021ರಲ್ಲಿ ಅಣೆಕಟ್ಟೆಗಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. ಅದರಂತೆ, ಅಣೆಕಟ್ಟೆಗಳು ಶಿಥಿಲವಾಗಿ ಜೀವಹಾನಿಯಾದರೆ ಅಣೆಕಟ್ಟೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಕಾನೂನಿನಡಿ ಶಿಕ್ಷೆಗೂ ಅವಕಾಶ ಇದೆ’ ಎಂದು ನವದೆಹಲಿಯ ಕೇಂದ್ರದ ಜಲ ಆಯೋಗದ ಸಹಾಯಕ ನಿರ್ದೇಶಕ ಅಕ್ಷಯ ಹೇಳಿದರು.
ಇಲ್ಲಿಯ ಸಮುದಾಯ ಭವನದಲ್ಲಿ ಕೇಂದ್ರ ಜಲ ಆಯೋಗ, ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಲ್ಲಿ ಅಣೆಕಟ್ಟೆಗಳ ನವೀಕರಣ ಮತ್ತು ಸುಧಾರಣೆ ಯೋಜನೆ (ಡ್ರಿಪ್) ಅಡಿ ಶುಕ್ರವಾರ ಏರ್ಪಡಿಸಿದ್ದ ಆಲಮಟ್ಟಿ ಅಣೆಕಟ್ಟು ಸುರಕ್ಷತೆ ಬಗ್ಗೆ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ಅಣೆಕಟ್ಟೆಗಳ ಸುರಕ್ಷತೆ, ಭದ್ರತೆ, ಮೇಲ್ವಿಚಾರಣೆಯು ಜಲಾಶಯದ ಅಧಿಕಾರಿಗಳ ಅತ್ಯಂತ ಮಹತ್ವದ ಹೊಣೆಗಾರಿಕೆ. ಕೇಂದ್ರ ಜಲ ಆಯೋಗವು ಪ್ರತಿ ರಾಜ್ಯದಲ್ಲಿ ಒಂದೊಂದು ಅಣೆಕಟ್ಟೆಗಳನ್ನು ಆಯ್ಕೆ ಮಾಡಿ, ಅಲ್ಲಿ ಅಣೆಕಟ್ಟೆಗಳ ಬಗ್ಗೆ ಜಾಗೃತಿ ಮಾಡಿಸುತ್ತದೆ. ಪ್ರಸಕ್ತ ವರ್ಷ ಕರ್ನಾಟಕದಲ್ಲಿ ಆಲಮಟ್ಟಿ ಅಣೆಕಟ್ಟೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್ ಹರಭಜನ್ ಸಿಂಗ್ ಮಾತನಾಡಿ, ‘ಆಲಮಟ್ಟಿ ಜಲಾಶಯವು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸುಪರ್ದಿಯಲ್ಲಿದ್ದು. ಅಲ್ಲಿ ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳ ಅವಶ್ಯಕತೆ ಇದೆ. ಜನ, ಜಾನುವಾರುಗಳ ರಕ್ಷಣೆ, ಭಯೋತ್ಪಾದಕ ಬೆದರಿಕೆ ಬಗ್ಗೆ ಭದ್ರತಾ ಪಡೆಗಳು ಸದಾ ಜಾಗೃತೆ ವಹಿಸಬೇಕು’ ಎಂದು ಹೇಳಿದರು.
ಸಮುದಾಯ ಜಾಗೃತಿ ಕುರಿತು ಚೆನ್ನೈನ ಅಣೆಕಟ್ಟೆ ಸುರಕ್ಷತಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಂಡ್ಲಾ ಹೇಮಾದಿತ್ಯ, ಅಣೆಕಟ್ಟೆ ಸುರಕ್ಷತೆಯ ಹೊಣೆಗಾರಿಕೆಯ ಕುರಿತು ಜ್ಯೋತಿ ಗುಪ್ತಾ, ದೀಪ್ತಿ ಮೋಹನ, ಎನ್‌ಡಿಆರ್‌ಎಫ್ ಹೊಣೆಗಾರಿಕೆಯ ಕುರಿತು ವಿಜಯವಾಡಾದ ಅಸಿಸ್ಟಂಟ್ ಕಮಾಂಡೆಂಟ್ ಮೊಹಮ್ಮದ್ ಅಸ್ಲಾಂ, ಹವಾಮಾನ ವೈಪರೀತ್ಯ ಹಾಗೂ ಮುನ್ಸೂಚನೆಯ ಅಗತ್ಯತೆ ಕುರಿತು ವಿಜ್ಞಾನಿ ರಾಜವೆಲ್ ಮಾಣಿಕ್ಯಂ, ಕೃತಕ ಉಪಗ್ರಹಗಳು ಹಾಗೂ ಜಿಐಎಸ್ ಬಳಕೆ ಕುರಿತು ವಿಜ್ಞಾನಿ ಅಸಿಯಾ ಬೇಗಂ, ಆಲಮಟ್ಟಿ ಅಣೆಕಟ್ಟೆ ಕುರಿತು ವಿಠ್ಠಲ ಜಾಧವ, ವಿಜಯಪುರ ಜಿಲ್ಲಾಡಳಿತದ ಹೊಣೆಗಾರಿಕೆಯ ಕುರಿತು ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ರಾಕೇಶ ಜೈನಾಪುರ ಉಪನ್ಯಾಸ ನೀಡಿದರು.
ಸ್ಥಳೀಯ ಜನರ ಪರವಾಗಿ ರೈತ ಮುಖಂಡ ಬಸವರಾಜ ಕುಂಬಾರ ಮಾತನಾಡಿದರು. ಆಲಮಟ್ಟಿಯ ಕೆಲವೆಡೆ ಜಾಗೃತಿ ಜಾಥಾ ಕಾರ್ಯಕ್ರಮವೂ ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ ಅಧಿಕಾರಿಗಳಾದ ವಿ.ಆರ್. ಹಿರೇಗೌಡರ, ಬಿ.ಎಸ್. ಪಾಟೀಲ, ಐ.ಎಲ್. ಕಳಸಾ, ರವಿ ಚಂದ್ರಗಿರಿಯವರ, ತಾರಾಸಿಂಗ್ ದೊಡಮನಿ ಇದ್ದರು.
ಕೆಬಿಜೆಎನ್ಎಲ್ ನೌಕರರು, ಕೆಲ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಹೊರತಾಗಿ ಸಾರ್ವಜನಿಕರು ಪಾಲ್ಗೊಂಡಿರಲಿಲ್ಲ.
‘ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಿ’
‘ಅಣೆಕಟ್ಟೆಗಳನ್ನು ನಿರ್ಮಿಸಲು ನಾನಾ ನಿಯಮ ರೂಪಿಸಲಾಗಿದೆ. ಹಳೆ ಅಣೆಕಟ್ಟೆಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರದ ಡ್ರಿಪ್ ಅಡಿ ನವೀಕರಣ ಹಾಗೂ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. 1979ರಲ್ಲಿ ಮಚ್ಚು ಡ್ಯಾಂ ಘಟನೆಯಿಂದ ಕೇಂದ್ರ ಜಲ ಆಯೋಗ ರಚನೆಯಾಯಿತು. ಅದರಡಿ ಭಾರತದಲ್ಲಿನ ಎಲ್ಲಾ ಅಣೆಕಟ್ಟೆಗಳ ಸುರಕ್ಷತೆ ಪ್ರವಾಹ ತಡೆಗಟ್ಟುವಿಕೆ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಕೇಂದ್ರದ ಜಲ ಆಯೋಗದ ಸಹಾಯಕ ನಿರ್ದೇಶಕ ಅಕ್ಷಯ ತಿಳಿಸಿದರು. ‘ನ್ಯಾಷನಲ್ ಕಮಿಟಿ ಆನ್ ಡ್ಯಾಂ ಸೇಫ್ಟಿ ಮೂಲಕವೂ ರಾಷ್ಟ್ರವ್ಯಾಪಿ ಅಣೆಕಟ್ಟೆಗಳ ಸ್ಥಿತಿಗತಿ ಪರಿಶೀಲನೆ ನಡೆಯುತ್ತಿದೆ. ದೇಶದಾದ್ಯಂತ 6628 ಅಣೆಕಟ್ಟೆಗಳಿದ್ದು ಅವೆಲ್ಲವೂ ಕೇಂದ್ರ ಜಲ ಆಯೋಗದ ಆಧೀನದಲ್ಲಿ ಬರುತ್ತವೆ. ಇತ್ತೀಚಿಗೆ ಛತ್ತೀಸಗಡದ ಲೂತಿ ಕರ್ನಾಟಕದ ತುಂಗಭದ್ರಾ ಜಲಾಶಯ ಶಿಥಿಲಗೊಂಡಿದ್ದರಿಂದ ಸಾಕಷ್ಟು ಹಾನಿಯಾಗಿದೆ. ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸುವುದು ಅಧಿಕಾರಿಗಳ ಹೊಣೆ’ ಎಂದರು.